ವಾಣಿಜ್ಯ

ಕಾಲ್ ಡ್ರಾಪ್: ನೀವು ತಿಳಿದುಕೊಳ್ಳಬೇಕಾದ ವಿಷಯಗಳು

Sumana Upadhyaya

ಚೆನ್ನೈ: ಭಾರತೀಯ ದೂರ ಸಂಪರ್ಕ ಪ್ರಾಧಿಕಾರದ ಕಾಲ್ ಡ್ರಾಪ್ ಪರಿಹಾರ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದ್ದು, ಮೊಬೈಲ್ ಬಳಕೆದಾರರಿಗೆ ಹಿನ್ನಡೆಯಾಗಿದೆ.

ದೇಶಾದ್ಯಂತ ಕಾಲ್ ಡ್ರಾಪ್ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವೊಡಾಫೋನ್, ಏರ್ ಟೆಲ್, ರಿಲಯನ್ಸ್ ನಂತಹ ಖಾಸಗಿ ದೂರಸಂಪರ್ಕ ಕಂಪೆನಿಗಳು ಕಾಲ್ ಡ್ರಾಪ್ ಗೆ ಪರಿಹಾರ ನೀಡಬೇಕೆಂದು ಟ್ರಾಯ್ ಹೇಳಿತ್ತು. ಇದನ್ನು ವಿರೋಧಿಸಿ ಕಂಪೆನಿಗಳು ನ್ಯಾಯಾಲಯದ ಮೊರೆ ಹೋಗಿತ್ತು. ಈ ಬಗ್ಗೆ ಇಂದು ಆದೇಶ ನೀಡಿದ ಸುಪ್ರೀಂ ಕೋರ್ಟ್ ಮೊಬೈಲ್ ನಿರ್ವಾಹಕರಿಗೆ ದಂಡ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಾಲ್ ಡ್ರಾಪ್ ಎಂದರೇನು?: ಸರ್ವೀಸ್ ಪ್ರೊವೈಡರ್ ನ ನೆಟ್ ವರ್ಕ್ ನ ವ್ಯಾಪ್ತಿಯೊಳಗೇ  ಮೊಬೈಲ್ ನಲ್ಲಿ ಮಾತನಾಡುವಾಗ ಮಧ್ಯದಲ್ಲಿಯೇ ಬಳಕೆದಾರರು ಕರೆಯನ್ನು ಕಟ್ ಮಾಡದಿದ್ದರೂ ಕರೆ ಕಡಿತವಾಗುವ ಸಮಸ್ಯೆಗೆ ಕಾಲ್ ಡ್ರಾಪ್ ಎನ್ನುತ್ತಾರೆ. ದೆಹಲಿ ಮತ್ತು ಮುಂಬೈಗಳಲ್ಲಿ ಟ್ರಾಯ್ ಕಾಲ್ ಡ್ರಾಪ್ ಸಮಸ್ಯೆ ಬಗ್ಗೆ ಪರೀಕ್ಷೆ ನಡೆಸಿದ್ದು, ದೆಹಲಿಯಲ್ಲಿ ಕಾಲ್ ಡ್ರಾಪ್ ಪ್ರಮಾಣ ಶೇಕಡಾ 17.29ರಷ್ಟಿದ್ದು, ಮುಂಬೈಯಲ್ಲಿ ಶೇಕಡಾ 5.56ರಷ್ಟಿದೆ. ಟ್ರಾಯ್ ನಿಯಮದ ಪ್ರಕಾರ ಅದು ಶೇಕಡಾ 2 ಕ್ಕಿಂತ ಕಡಿಮೆ ಇರಬೇಕು.

ಟ್ರಾಯ್ ಹೇಳಿದ್ದೇನು?: ಮೊಬೈಲ್ ಕರೆಗಳಿಗೆ ಪ್ರತಿ ನಿಮಿಷಕ್ಕೆ ದರ ಕಡಿತವಾಗುತ್ತದೆ. ಅಂದರೆ ನೀವು ಕರೆ ಮಾಡುತ್ತಾ ಕೆಲವು ಸೆಕೆಂಡ್ ಗಳಲ್ಲಿ ಕರೆ ಕಡಿತಗೊಂಡರೆ ಪ್ರತಿ ಸೆಕೆಂಡ್ ಗೆ ಬದಲು, ಪ್ರತಿ ನಿಮಿಷದ ಆಧಾರದಲ್ಲಿ ಹಣ ಕಡಿತವಾಗುತ್ತದೆ. ಗ್ರಾಹಕರು ಮೊದಲ ಸಲ ಕಾಲ್ ಕಟ್ ಆದಾಗ ಎರಡನೇ, ಮೂರನೇ ಸಲ ಮಾಡುತ್ತಾರೆ. ಆಗ ಟೆಲಿಕಾಂ ಕಂಪೆನಿಗಳಿಗೆ ಹೆಚ್ಚಿನ ಆದಾಯ ತಂದುಕೊಡುತ್ತದೆ. ಭಾರತದಲ್ಲಿ 4 ಲಕ್ಷದ 25 ಸಾವಿರ ಟ್ರಾನ್ಸ್ ಮಿಟಿಂಗ್ ಸ್ಟೇಷನ್ ಗಳಿವೆ. ಆದರೆ ದೇಶಕ್ಕೆ 6 ಲಕ್ಷದ 25 ಸಾವಿರ ಟ್ರಾನ್ಸ್ ಮಿಟಿಂಗ್ ಕೇಂದ್ರಗಳ ಅಗತ್ಯವಿದೆ. ಆದ್ದರಿಂದ ಗ್ರಾಹಕರಿಗೆ ನೆರವಾಗಲು ದೇಶದಲ್ಲಿ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ.

ಕಂಪನಿಗಳು ಹೇಳಿದ್ದೇನು?: ಕಾಲ್ ಡ್ರಾಪ್ ಸಮಸ್ಯೆಗೆ ಮುಖ್ಯ ಕಾರಣ ತರಂಗಾಂತರ ಕೊರತೆ ಹಾಗು ಜನವಸತಿ ಕಲ್ಯಾಣಾಭಿವೃದ್ಧಿ ಸಂಘಸಂಸ್ಥೆಗಳು ಹೊಸ ಮೊಬೈಲ್ ಟವರ್ ಗಳ ಅಳವಡಿಕೆಗೆ ಅಡ್ಡಿಪಡಿಸುತ್ತಿರುವುದು.

ಕಾಲ್ ಡ್ರಾಪ್ ಗೆ ಕಾರಣವೇನು?: ತಾಂತ್ರಿಕ ಮತ್ತು ತಾಂತ್ರಿಕೇತರ ಕಾರಣಗಳು ಕಾಲ್ ಡ್ರಾಪ್ ಗೆ ಕಾರಣವಾಗಬಹುದು. ಮುಖ್ಯ ತಾಂತ್ರಿಕ ಕಾರಣಗಳು ರೇಡಿಯೋ ತರಂಗಾಂತರಗಳು, ಸಂಪರ್ಕ ಜಾಲದ ಕೊರತೆ, ಓವರ್ ಲೋಡ್ ಮೊದಲಾದವುಗಳು. ತಾಂತ್ರಿಕೇತರ ಕಾರಣಗಳೆಂದರೆ ಕಡಿಮೆ ಬ್ಯಾಟರಿ, ಪ್ರಿಪೇಯ್ಡ್ ಸಂಪರ್ಕದಲ್ಲಿ ಕಡಿಮೆ ಹಣ ಇತ್ಯಾದಿಗಳು. ನೀವು ಯಾರಾದರ ಜೊತೆ ಮಾತನಾಡುತ್ತಾ ಮುನಿಸಿಕೊಂಡು ಕರೆ ಕಡಿತಗೊಳಿಸಿದರೆ ಅದನ್ನು ಕೂಡ ಕಾಲ್ ಡ್ರಾಪ್ ಎಂದೇ ಪರಿಗಣಿಸಲಾಗುತ್ತದೆ.

ಟ್ರಾಯ್ ಕೇಳಿದ್ದೇನು?: ಕಾಲ್ ಡ್ರಾಪ್ ನಿಂದ ಹಣ ಕಡಿತಗೊಂಡ ಗ್ರಾಹಕರಿಗೆ ದೂರವಾಣಿ ಕಂಪೆನಿಗಳು ಪ್ರತಿ ಕರೆಗೆ 1 ರೂಪಾಯಿ ಪರಿಹಾರ ನೀಡಬೇಕೆಂದು ಟ್ರಾಯ್ ಆದೇಶ ನೀಡಿತ್ತು. ಗ್ರಾಹಕರು ಕರೆ ಮಾಡುತ್ತಿದ್ದಾಗ ಕಡಿತಗೊಂಡರೆ ಕಂಪೆನಿಗಳು 4 ಗಂಟೆಗಳೊಳಗೆ ಮೊಬೈಲ್ ಗೆ ಸಂದೇಶ ಕಳುಹಿಸಬೇಕು. ಅದರಲ್ಲಿ ಎಷ್ಟು ದರ ಕಡಿತಗೊಂಡಿದೆ ಎಂದು ಹೇಳಿ ಹಣವನ್ನು ಕ್ರೆಡಿಟ್ ಮಾಡಬೇಕು.ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮುಂದಿನ ಬಿಲ್ ನಲ್ಲಿ ಹಣದ ವಿವರವನ್ನು ಒದಗಿಸಬೇಕು.

ಕಂಪೆನಿಗಳು ವಿರೋಧಿಸಿದ್ದೇಕೆ?: ಈ ನಿಯಮ ಜಾರಿಗೆ ತಂದರೆ ಗ್ರಾಹಕರು ಬುದ್ಧಿ ಚಾತುರ್ಯದಿಂದ ಪ್ರತಿ ದಿನಕ್ಕೆ ಗರಿಷ್ಠ 3 ರೂಪಾಯಿಯಷ್ಟು ಪರಿಹಾರ ಸಿಗಬೇಕೆಂದು ಕೇಳಬಹುದು. ಗ್ರಾಹಕರು ತಪ್ಪು ಹಾದಿ ಹಿಡಿಯುವ ಸಾಧ್ಯತೆ ಹೆಚ್ಚು. ಮೊಬೈಲ್ ನ ಬ್ಯಾಟರಿ ಕಡಿಮೆಯಾದರೆ ಮತ್ತು ಪ್ರಿ ಪೇಯ್ಡ್ ನಲ್ಲಿ ಜೀರೋ ಬ್ಯಾಲೆನ್ಸ್ ಗೆ ಹತ್ತಿರವಿದ್ದರೆ ಕಾಲ್ ಡ್ರಾಪ್ ಉಂಟಾಗಬಹುದು. ನೆಟ್ ವರ್ಕ್ ಸಮಸ್ಯೆಯಿಂದಲೂ ಕರೆ ಕಡಿತವಾಗಬಹುದು ಎಂಬುದು ಮೊಬೈಲ್ ನಿರ್ವಾಹಕರ ವಾದ.

SCROLL FOR NEXT