ನವದೆಹಲಿ: ಇನ್ನು ಮುಂದೆ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ನಿಮ್ಮ ಹೆಸರು ವೈಟಿಂಗ್ ಲಿಸ್ಟ್ ನಲ್ಲಿದ್ದರೆ ತಲುಪಬೇಕಾದ ಸ್ಥಳಕ್ಕೆ ರೈಲಿನಲ್ಲಿ ಹೋಗುವುದು ಹೇಗೆ ಎಂದು ಚಿಂತಿಸಬೇಕಾಗಿಲ್ಲ. ಹೆಚ್ಚುವರಿ ಹಣ ನೀಡಿ ಏರ್ ಇಂಡಿಯಾ ವಿಮಾನದಲ್ಲಿ ನೀವು ಹೋಗಬೇಕಾದ ಸ್ಥಳಕ್ಕೆ ಹೋಗಬಹುದು. ಹೀಗೊಂದು ಒಪ್ಪಂದವನ್ನು ಏರ್ ಇಂಡಿಯಾ ವಿಮಾನ ಸಂಸ್ಥೆ ಮತ್ತು ಭಾರತೀಯ ರೈಲ್ವೆ ಇಲಾಖೆ ಮಾಡಿಕೊಂಡಿವೆ.
ಈ ಒಪ್ಪಂದ ಇನ್ನೊಂದು ವಾರದಲ್ಲಿ ಅಂದರೆ ಜೂನ್ ಆರಂಭದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ವಿಮಾನಯಾನ ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಉದ್ದೇಶಿತ ಒಪ್ಪಂದದಲ್ಲಿ, ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಟಿಕೆಟ್ ದೃಢೀಕೃತವಾಗಿರದಿದ್ದರೆ ಏರ್ ಇಂಡಿಯಾ ವಿಮಾನವನ್ನೇರಿ ಪ್ರಯಾಣಿಸುವ ಅವಕಾಶವಿದೆ. ಐಆರ್ ಸಿಟಿಸಿ ಮೂಲಕ ಏರ್ ಇಂಡಿಯಾ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.
ರಾಜಧಾನಿ ರೈಲಿನ ಎಸಿ ಮೊದಲನೇ ದರ್ಜೆಯಲ್ಲಿ ಟಿಕೆಟ್ ಬುಕ್ ಮಾಡಿ ವೈಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಹೆಚ್ಚುವರಿ ಟಿಕೆಟ್ ದರವನ್ನು ವಿಮಾನಕ್ಕೆ ನೀಡಬೇಕಾಗಿಲ್ಲ. ದ್ವಿತೀಯ ಮತ್ತು ಮೂರನೇ ಎಸಿ ವರ್ಗಗಳಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಹೆಚ್ಚುವರಿ 2 ಸಾವಿರ ರೂಪಾಯಿಗಳನ್ನು ನೀಡಬೇಕು ಎನ್ನುತ್ತಾರೆ ಅಶ್ವನಿ ಲೊಹನಿ.
ಸ್ಥಳೀಯ ವಾಯುಮಾರ್ಗ ಸಂಪರ್ಕ ಕಲ್ಪಿಸಲು ಮುಂದಿನ ದಿನಗಳಲ್ಲಿ ಸಣ್ಣ ವಿಮಾನಗಳನ್ನು ಹೆಚ್ಚಿಸುವ ಯೋಜನೆಯಲ್ಲಿ ಏರ್ ಇಂಡಿಯಾ ಇದೆ. ರೈಲಿನೊಂದಿಗೆ ಕೈ ಜೋಡಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಏರ್ ಇಂಡಿಯಾದಲ್ಲಿ ಹೆಚ್ಚಾಗುತ್ತದೆ ಎನ್ನುತ್ತಾರೆ ಲೊಹನಿ.