ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ (ಸಂಗ್ರಹ ಚಿತ್ರ)
ಮುಂಬೈ: ಕೇಂದ್ರ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ ಶೇಕಡಾ 6.25ಕ್ಕೆ ನಿಗದಿಗೊಳಿಸಿದೆ. ರಿವರ್ಸ್ ರೆಪೊ ದರವನ್ನು ದ್ರವ್ಯತೆ ಹೊಂದಾಣಿಕೆ ಸೌಲಭ್ಯ(ಎಲ್ಎಎಫ್) ಅಡಿ ಶೇಕಡಾ 5.75ಕ್ಕೆ ನಿಗದಿಪಡಿಸಿದೆ. ಕನಿಷ್ಠ ಸ್ಥಿರ ಸೌಲಭ್ಯ(ಎಮ್ಎಸ್ಎಫ್) ದರ ಕೂಡ ಶೇಕಡಾ 6.75 ಆಗಿದೆ. ಕಳೆದ ತಿಂಗಳು ಆರ್ ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಊರ್ಜಿತ್ ಪಟೇಲ್ ಅವರ ಮೊದಲ ಯೋಜನಾ ನೀತಿ ಘೋಷಣೆ ಇದಾಗಿದೆ.
ಈ ಮೂಲಕ 2010ರ ನಂತರ ರೆಪೊ ದರ ಅತ್ಯಂತ ಕನಿಷ್ಠವಾಗಿದೆ. ಈ ಸಂದರ್ಭದಲ್ಲಿ ಹಣಕಾಸು ನೀತಿ ಸಮಿತಿಯ ಆರು ಸದಸ್ಯರು ರೆಪೊ ದರ ಕಡಿತದ ಪರವಾಗಿ ಮತ ಹಾಕಿದರು.
ಕೇಂದ್ರ ಸರ್ಕಾರದ ಮತ್ತು ಆರ್ ಬಿಐ ಹಣಕಾಸು ನೀತಿಗಳು ಹೆಚ್ಚು ಪಾರದರ್ಶಕವಾಗಿರಲು ಮತ್ತು ಒಮ್ಮತವಾಗಿರಲು ಹಣಕಾಸು ನೀತಿ ಸಮಿತಿಯನ್ನು ಜಾರಿಗೆ ತರಲಾಗಿತ್ತು. ಇದುವರೆಗೆ ದರ ನಿಗದಿಯ ಜವಾಬ್ದಾರಿಯನ್ನು ಗವರ್ನರ್ ಮಾತ್ರ ನಿರ್ವಹಿಸುತ್ತಿದ್ದರು. ಆದರೆ ಇನ್ನು ಮುಂದೆ ಗನರ್ವರ್ ಯಾವುದೇ ದರ ಕಡಿತ, ನಿಗದಿ ಮಾಡುವ ಮುನ್ನ ಇತರ ಸದಸ್ಯರ ಸಲಹೆಯನ್ನು ಪಡೆಯಬೇಕಾಗುತ್ತದೆ. ಇನ್ನು ಕೂಡ ಸಮಿತಿಯ ತಂಡ ವಿಭಾಗವಾದರೆ ಗವರ್ನರ್ ಅವರೇ ನಿರ್ಧಾರಿತ ಮತ ಹಾಕುವ ಅಧಿಕಾರ ಹೊಂದಿದ್ದಾರೆ. ಇದು 2016-17ನೇ ಸಾಲಿನ ಆರ್ ಬಿಐಯ ನಾಲ್ಕನೇ ನೀತಿ ಹೇಳಿಕೆಯಾಗಿದೆ.
ರೆಪೊ ದರ: ಬ್ಯಾಂಕುಗಳು ಆರ್ ಬಿಐನಿಂದ ಪಡೆಯುವ ಹಣಕ್ಕೆ ವಿಧಿಸುವ ಬಡ್ಡಿಯೇ ರೆಪೊ ದರ. ಈಗ ಆರ್ ಬಿಐ 25 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿರುವುದರಿಂದ ಬ್ಯಾಂಕುಗಳಿಗೆ ಆರ್ ಬಿಐನಿಂದ ಸ್ವಲ್ಪ ಅಗ್ಗದ ದರದಲ್ಲಿ ಹಣಕಾಸು ಪೂರೈಕೆಯಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಅಂದರೆ ಜನರಿಗೆ ಕಡಿಮೆ ಬಡ್ಡಿಗೆ ಗೃಹ, ವಾಹನ, ಕಾರ್ಪೊರೇಟ್ ಸಾಲಗಳು ದೊರಕುತ್ತವೆ.
ರಿವರ್ಸ್ ರೆಪೊ ದರ: ಇದು ಅಲ್ಪಾವಧಿ ಸಾಲ ದರವಾಗಿದ್ದು, ಆರ್ ಬಿಐ ಬ್ಯಾಂಕುಗಳಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿ ಮೊತ್ತ. ಬ್ಯಾಂಕುಗಳಲ್ಲಿ ಭಾರೀ ಹಣ ಹರಿದುಬರುತ್ತಿದೆ ಎಂದು ಕಂಡಾಗ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಂದ ಹಣ ಪಡೆಯುತ್ತದೆ. ರಿವರ್ಸ್ ರೆಪೊ ದರ ಹೆಚ್ಚಾಗಿದೆ ಎಂದರೆ ಬ್ಯಾಂಕುಗಳು ಆರ್ ಬಿಐನಿಂದ ಹೆಚ್ಚಿನ ಬಡ್ಡಿ ಗಳಿಸುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics