ನವದೆಹಲಿ: ಉಚಿತ ಕಾಲಿಂಗ್, ಅನಿಯಮಿತ ರೋಮಿಂಗ್ ಹಾಗೂ ತೀರಾ ಅಗ್ಗದ ದರದ ಡಾಟಾ ಪ್ಲಾನ್ ಗಳನ್ನೊಳಗೊಂಡಿರುವ ರಿಲಯನ್ಸ್ ಜಿಯೋ ಸಿಮ್ ಯೋಜನೆಯಿಂದಾಗಿ ಭಾರತದ ಇತರೆ ಟೆಲಿಕಾಮ್ ಸಂಸ್ಥೆಗಳಿದೆ ಭಾರಿ ನಷ್ಟವಾಗುತ್ತಿದ್ದು, ಯೋಜನೆ ಘೋಷಣೆಯಾದ ಕೇವಲ 2 ದಿನದಲ್ಲಿ ಖ್ಯಾತ ಸೆಲ್ಯುಲಾರ್ ಸಂಸ್ಥೆ ಐಡಿಯಾ ಬರೊಬ್ಬರಿ 4, 500 ಕೋಟಿ ನಷ್ಟ ಅನುಭವಿಸಿದೆ.
ತೀರಾ ಅಗ್ಗದ 3ಜಿ ಮತ್ತು 4ಜಿ ಡಾಟಾ ಸೇವೆ ಒದಗಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಯೋಜನೆಯಿಂದಾಗಿ ಎದುರಾಳಿ ಸಂಸ್ಥೆಗಳಾದ ಐಡಿಯಾ, ಏರ್ ಟೆಲ್ ಹಾಗೂ ವೊಡಾಫೋನ್ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿದ್ದು, ಯೋಜನೆ ಘೋಷಣೆಯಾದ ಕೇವಲ 2 ದಿನದಲ್ಲಿ ಈ ಮೂರು ಸಂಸ್ಥೆಗಳ ಷೇರು ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ.
ಆರ್ಥಿಕ ತಜ್ಞರ ಲೆಕ್ಕಾಚಾರದ ಪ್ರಕಾರ ಕೇವಲ 2 ದಿನಗಳ ಅವಧಿಯಲ್ಲಿ ಐಡಿಯಾ ಸಂಸ್ಥೆ ಮಾರುಕಟ್ಟೆಯಲ್ಲಿ ಬರೊಬ್ಬರಿ 4, 500 ಕೋಟಿ ರು.ನಷ್ಟವನ್ನು ಅನುಭವಿಸಿದೆಯಂತೆ. ಕೇವಲ ಐಡಿಯಾ ಮಾತ್ರವಲ್ಲದೇ ದೇಶದ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಏರ್ ಟೆಲ್ ಸಂಸ್ಥೆಗೂ ಹೊಡೆತ ಬಿದ್ದಿದ್ದು, ಷೇರುಮಾರುಕಟ್ಟೆಯಲ್ಲಿ ಏರ್ ಟೆಲ್ ಷೇರಿನ ಮೌಲ್ಯದಲ್ಲಿ ಬರೊಬ್ಬರಿ ಶೇ.9ರಷ್ಟು ಇಳಿಕೆಯಾಗಿದ್ದು, ಕೇವಲ 302 ರು.ಗಳಿಗೆ ಏರ್ ಟೆಲ್ ಷೇರುಗಳು ಮಾರಾಟವಾಗುತ್ತಿದೆ. ಅಂತೆಯೇ ಐಡಿಯಾ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.9.1ರಷ್ಟು ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ 6.5ರಷ್ಟು ಇಳಿಕೆಯಾಗಿದೆ.
ಮಾರುಕಟ್ಟೆಯ ಹಾಲಿ ಪರಿಸ್ಥಿತಿ ಮತ್ತಷ್ಟು ದಿನಗಳ ಕಾಲ ಹಾಗೆಯೇ ಮುಂದುವರೆಯಲಿದ್ದು, ಏರ್ ಟೆಲ್, ಐಡಿಯಾ, ವೋಡಾಫೋನ್ ಮತ್ತು ರಿಲಯನ್ಸ್ ಕಮ್ಯುನಿಕೇಷನ್ ಸಂಸ್ಥೆಯ ಗ್ರಾಹಕರು ರಿಲಯನ್ಸ್ ಜಿಯೋ ನತ್ತ ಮುಖ ಮಾಡಿರುವುದೇ ಪ್ರಸ್ತುತ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರ್ತಿ ಏರ್ ಟೆಲ್ ಸಂಸ್ಥೆಯ ಪಾರುಪತ್ಯ ಅಂತ್ಯಗೊಳಿಸಿ, 2020ರ ವೇಳೆಗೆ ಶೇ.80ರಷ್ಟು ಮಾರುಕಟ್ಟೆ ಹೊಂದುವ ಭಾರಿ ಯೋಜನೆಯನ್ನು ಮುಖೇಶ್ ಅಂಬಾನಿ ನೇತೃತ್ವ ರಿಲಯನ್ಸ್ ಸಂಸ್ಥೆ ಹೊಂದಿದ್ದು, ಇದೇ ಕಾರಣಕ್ಕೆ ತೀರಾ ಅಗ್ಗದ ದರದ ಯೋಜನೆಗಳನ್ನು ಘೋಷಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.