ಮುಕೇಶ್ ಅಂಬಾನಿ-ದಿಲೀಪ್ ಸಾಂಘ್ಲಿ
ಸಿಂಗಾಪುರ: ಸತತ 9ನೇ ವರ್ಷ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದು ಅವರ ಒಟ್ಟಾರೆ ಸಂಪತ್ತು ಮೌಲ್ಯ 22.7 ಶತಕೋಟಿ ಡಾಲರ್ ಆಗಿದೆ.
ಅಮೆರಿಕಾದ ವಾಣಿಜ್ಯ ಮ್ಯಾಗಜೀನ್ ಫೋರ್ಬ್ಸ್ ನಡೆಸಿದ ದೇಶದ 100 ಶ್ರೀಮಂತ ಉದ್ಯಮಿಗಳ ಸಮೀಕ್ಷೆಯಲ್ಲಿ ಸನ್ ಫಾರ್ಮಾದ ದಿಲೀಪ್ ಸಾಂಘ್ವಿ 2ನೇ ಅತಿ ದೊಡ್ಡ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅವರ ಸಂಪಾದನೆ ಮೌಲ್ಯ 16.9 ಶತಕೋಟಿ ರೂಪಾಯಿಯಾಗಿದೆ.
ಹಿಂದುಜಾ ಕುಟುಂಬದವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ವಾರ್ಷಿಕ ಗಳಿಕೆ 15.2 ಶತಕೋಟಿ ಡಾಲರ್ ಆಗಿದ್ದು, ವಿಪ್ರೋದ ಅಜೀಂ ಪ್ರೇಮ್ ಜಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಅವರ ಸಂಪತ್ತಿನ ಮೌಲ್ಯ 15 ಶತಕೋಟಿ ಆಗಿದೆ.
ಯೋಗ ಗುರು ಬಾಬಾ ರಾಮದೇವ್ ಅವರಿಗೆ ಆಪ್ತರಾಗಿರುವ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಈ ವರ್ಷ ಆಶ್ಚರ್ಯಕರ ರೀತಿಯಲ್ಲಿ 48ನೇ ಸ್ಥಾನ ಗಳಿಸಿದ್ದಾರೆ.
ಭಾರತದ 100 ಶ್ರೀಮಂತ ಉದ್ಯಮಿಗಳ ಒಟ್ಟಾರೆ ಗಳಿಕೆ ಮೌಲ್ಯ 381 ಶತಕೋಟಿ ಡಾಲರ್ ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಜಾಸ್ತಿಯಾಗಿದೆ. ಕಳೆದ ವರ್ಷ ಈ ಮೌಲ್ಯ 345 ಶತಕೋಟಿ ಡಾಲರ್ ಆಗಿತ್ತು.
ಮುಕೇಶ್ ಅಂಬಾನಿಯವರ ಸಂಪತ್ತು ಮೌಲ್ಯ ಕಳೆದ ವರ್ಷ 18.9 ಶತಕೋಟಿ ಡಾಲರ್ ಆಗಿತ್ತು. ರಿಲಯನ್ಸ್ ಇಂಡಸ್ಟ್ರಿಸ್ ನ ಷೇರು ಬೆಲೆ ಶೇಕಡಾ 21ರಷ್ಟು ಹೆಚ್ಚಾಗಿದ್ದು ಇತ್ತೀಚೆಗೆ 4ಜಿ ಮೊಬೈಸ್ ಸೇವೆ ಒದಗಿಸುವ ಮೂಲಕ ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಜಗತ್ತಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ 36ನೇ ಸ್ಥಾನ. ಅವರ ಸೋದರ ಅನಿಲ್ ಅಂಬಾನಿ 32ನೇ ಸ್ಥಾನ ಗಳಿಸಿದ್ದು ಅವರ ಸಂಪತ್ತು ಮೌಲ್ಯ 3.4 ಶತಕೋಟಿ ಡಾಲರ್ ಆಗಿದೆ. ಇವರು ಕಳೆದ ವರ್ಷ 29ನೇ ಸ್ಥಾನದಲ್ಲಿದ್ದರು.