ಚೀನಾಗೆ ಕತ್ತೆಗಳನ್ನು ರಫ್ತು ಮಾಡಲಿರುವ ಪಾಕಿಸ್ತಾನ!
ಪಾಕಿಸ್ತಾನ ತನ್ನ ಪರಮಾಪ್ತ ರಾಷ್ಟ್ರಕ್ಕೆ ಕತ್ತೆಗಳನ್ನು ರಫ್ತು ಮಾಡಲಿದೆಯಂತೆ. ಹೌದು, ಪಾಕಿಸ್ತಾನ ತನ್ನ ಕತ್ತೆ ಅಭಿವೃದ್ಧಿ ಯೋಜನೆಯಡಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲಿದೆ.
ಪೇಷಾವರ್: ಪಾಕಿಸ್ತಾನ ತನ್ನ ಪರಮಾಪ್ತ ರಾಷ್ಟ್ರಕ್ಕೆ ಕತ್ತೆಗಳನ್ನು ರಫ್ತು ಮಾಡಲಿದೆಯಂತೆ. ಹೌದು, ಪಾಕಿಸ್ತಾನ ತನ್ನ ಕತ್ತೆ ಅಭಿವೃದ್ಧಿ ಯೋಜನೆಯಡಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲಿದೆ.
ಕತ್ತೆ ಅಭಿವೃದ್ಧಿ ಯೋಜನೆಗೆ 1 ಬಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದ್ದು, ತನ್ನ ಖೈಬರ್-ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಚೀನಾದ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಕತ್ತೆಗಳನ್ನು ಚೀನಾಗೆ ರಫ್ತು ಮಾಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಈ ಪ್ರಾಂತ್ಯದ ಕತ್ತೆಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೆಲೆ ಇದ್ದು, ಈ ಪ್ರಾಂತ್ಯದಲ್ಲಿರುವ ಕತ್ತೆಗಳ ಚರ್ಮದಿಂದ ಔಷಧಗಳನ್ನು ತಯಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ತೀರ್ಮಾನಿಸಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಅಡಿಯಲ್ಲಿ ಖೈಬರ್-ಪಖ್ತೂನ್ಖ್ವಾ-ಚೀನಾ ಕತ್ತೆ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ತಿಂಗಳು ಚೀನಾದಲ್ಲಿ ನಡೆಯಲಿರುವ 2 ದಿನಗಳ ಕಾರ್ಯಕ್ರಮದಲ್ಲಿ ರಫ್ತು ಪ್ರಸ್ತಾವನೆಯನ್ನು ಚೀನಾದ ಹೂಡಿಕೆದಾರರ ಮುಂದಿಡಲಾಗುತ್ತದೆ.