ಫೋಟೋ ಕೃಪೆ-ಅಸೋಸಿಯೇಟೆಡ್ ಪ್ರೆಸ್
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ ಬಜೆಟ್ ನ ನಂತರ ಷೇರು ವಿನಿಮಯ ಮಾರುಕಟ್ಟೆಯ ವಹಿವಾಟಿನಲ್ಲಿ ಏರಿಕೆ ಕಂಡುಬಂದಿದೆ. ಮೂಲಭೂತ ಸೌಕರ್ಯ, ಉದ್ಯಮ,ಸಣ್ಣ ಉದ್ಯಮಗಳಲ್ಲಿ ತೆರಿಗೆ ಕಡಿತದ ಯೋಜನೆಗಳನ್ನು ಪ್ರಕಟಿಸಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಳವಾಗಿದೆ. ಮುಂಬೈಯ ಷೇರು ವಿನಿಮಯ ಮಾರುಕಟ್ಟೆ ತಜ್ಞರು ಕೂಡ ಒಟ್ಟು ದೇಶೀಯ ಉತ್ಪನ್ನದಲ್ಲಿ ವಿತ್ತೀಯ ಕೊರತೆಯನ್ನು 2017-18ರಲ್ಲಿ ಶೇಕಡಾ 3.2ರಲ್ಲಿ ನಿಲ್ಲಸುವುದು ಮತ್ತು 2018-19ರಲ್ಲಿ ಶೇಕಡಾ 3ಕ್ಕೆ ನಿಲ್ಲಿಸಲು ಸರ್ಕಾರ ನಿರ್ಧರಿಸಿರುವುದು ಏರಿಕೆಗೆ ಕಾರಣವಾಗಿದೆ.
ಹಣಕಾಸು ಸಚಿವರ ಬಜೆಟ್ ಭಾಷಣ ಮುಗಿದ ನಂತರ ಸೆನ್ಸೆಕ್ಸ್ 491 ಅಂಕ ಏರಿಕೆ ಕಂಡು 28,147 ತಲುಪಿತ್ತು ಮತ್ತು ನಿಫ್ಟಿ 160 ಅಂಕಗಳ ಏರಿಕೆ ಕಂಡು 8,720 ರಲ್ಲಿ ನಿಂತಿತ್ತು.
ಟ್ಯಾಕ್ಸ್ ಮನ್ನ್ ನ ನಿರ್ದೇಶಕ ರಾಕೇಶ್ ಭಾರ್ಗವ, ಸಣ್ಣ ಕಂಪೆನಿಗಳ ಕಾರ್ಪೊರೇಟ್ ತೆರಿಗೆ ದರಗಳು ಸ್ಟಾರ್ಟ್ ಅಪ್ ಗೆ ಪೂರಕ ವಾತಾವರಣ ನೀಡುತ್ತದೆ. ಕಂಪೆನಿಯ ಅಳವಡಿಕೆಗೆ ಅಸಂಘಟಿತ ಪಾಲುದಾರಿಕೆ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತದೆ.
ಸುಮಾರು ಶೇಕಡಾ 96 ಕಂಪೆನಿಗಳಿಗೆ ಕಡಿಮೆ ತೆರಿಗೆ ದರದಿಂದ ಸಹಾಯವಾಗಲಿದೆ ಎನ್ನುತ್ತಾರೆ.
ಬ್ಯಾಕಿಂಗ್ ವಲಯದ ಷೇರುಗಳು ಕೂಡ ಬಜೆಟ್ ಮಂಡನೆ ನಂತರ ಹೆಚ್ಚಿನ ಬೆಲೆಗೆ ಮಾರಾಟವಾದವು. ಇಂಧನ, ಆಟೋ, ಮೂಲಭೂತ ಮತ್ತು ರಿಯಲ್ ಎಸ್ಟೇಟ್ ಷೇರುಗಳ ಮಾರಾಟ ಕೂಡ ಏರಿಕೆ ಕಂಡುಬಂದಿದೆ.
ಆದರೆ ಅಮೆರಿಕಾ ಸರ್ಕಾರದಲ್ಲಿನ ವೀಸಾ ನೀತಿ ಬದಲಾವಣೆಯಿಂದ ಐಟಿ ವಲಯದ ಷೇರುಗಳ ಮಾರಾಟ ಬೆಲೆಯಲ್ಲಿ ಇಳಿಕೆಯಾಗಿದೆ.
ಇಂದಿನ ಷೇರು ಮಾರುಕಟ್ಟೆ ವಹಿವಾಟು ಮುಗಿಯುವ ಹೊತ್ತಿಗೆ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 486 ಅಂಕ ಏರಿಕೆ ಕಂಡುಬಂದು 28,142ರಲ್ಲಿ ನಿಂತರೆ, ನಿಫ್ಟಿ 155 ಅಂಕ ಏರಿಕೆ ಕಂಡು 8,716ರಲ್ಲಿ ನಿಂತಿದೆ.