ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ನವದೆಹಲಿ: ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮೌಲ್ಯದ ನೋಟ್ ಗಳನ್ನು ಅಮಾನ್ಯಗೊಳಿಸಿದ ನಂತರ ದೇಶದ 29 ರಾಜ್ಯಗಳಲ್ಲಿ ಒಟ್ಟು 11.23 ಕೋಟಿ ರುಪಾಯಿ ಮೌಲ್ಯದ ನಕಲಿ ನೋಟ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ಈ ಕುರಿತು ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ನಕಲಿ ನೋಟ್ ನಿಯಂತ್ರಿಸುವುದಕ್ಕಾಗಿ ಆರ್ ಬಿಐ ಇತ್ತೀಚಿಗೆ ಹೊಸ ಮೊಬೈಲ್ ಆಪ್ ವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹೊಸ 500 ಹಾಗೂ 2000 ರುಪಾಯಿ ನೋಟ್ ಗಳ ವೈಶಿಷ್ಟ್ಯೆಗಳನ್ನು ಪರಿಶೀಲಿಸಬಹುದಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ(ಎನ್ ಸಿ ಆರ್ ಬಿ) ನೀಡಿರುವ ಮಾಹಿತಿ ಪ್ರಕಾರ, 29 ರಾಜ್ಯಗಳಲ್ಲಿ ಜುಲೈ 14ರ ವರೆಗೆ ಒಟ್ಟು 1,57,797 ನಕಲಿ ನೋಟ್ ಗಳನ್ನು ಪತ್ತೆ ಹಚ್ಚಲಾಗಿದ್ದು, ಇವುಗಳ ಒಟ್ಟು ಮೌಲ್ಯ 11.23 ಕೋಟಿ ರುಪಾಯಿಯಾಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ನವೆಂಬರ್ 8ರಂದು ದಿಢೀರ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಲಾಗಿದೆ ಎಂದು ಘೋಷಿಸಿದ್ದರು.