ವಾಣಿಜ್ಯ

ನೋಟ್ ನಿಷೇಧದಿಂದ ಆಟೋಮೊಬೈಲ್‌, ಟ್ರಾಕ್ಟರ್‌ ವಲಯಕ್ಕೆ 8,000 ಕೋಟಿ ನಷ್ಟ

Lingaraj Badiger
ನವದೆಹಲಿ: ಕೇಂದ್ರ ಸರ್ಕಾರದ ಗರಿಷ್ಠ ಮೌಲ್ಯದ ನೋಟು ನಿಷೇಧ ಕ್ರಮದಿಂದಾಗಿ ಆಟೋಮೊಬೈಲ್‌ ಹಾಗೂ ಟ್ರಾಕ್ಟರ್‌ ವಲಯದ ಕಂಪೆನಿಗಳಿಗೆ ಸುಮಾರು 8,000 ಕೋಟಿ ರುಪಾಯಿಗಳ ಆದಾಯ ನಷ್ಟವಾಗಿದೆ ಎಂದು ಮಹೀಂದ್ರ ಆಂಡ್‌ ಮಹೀಂದ್ರ ಕಂಪೆನಿಯ ಆಡಳಿತ ನಿರ್ದೇಶಕ ಪವನ್‌ ಗೊಯೆಂಕಾ ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಹಬ್ಬದ ಸೀಸನ್‌ ಫ‌ಲವಾಗಿ ಉತ್ತುಂಗದ ಮಾರಾಟದಲ್ಲಿದ್ದ ಆಟೋಮೊಬೈಲ್‌ ಮತ್ತು ಟ್ರಾಕ್ಟರ್‌ ರಂಗದ ಕಂಪೆನಿಗಳು, 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ  ಬಹುತೇಕ ನಿಲುಗಡೆಗೆ ಬಂದು ತಲುಪಿದ್ದವು ಎಂದು ಗೊಯೆಂಕಾ ತಿಳಿಸಿದ್ದಾರೆ.
ನವೆಂಬರ್‌ ನಲ್ಲಿ ವಾಹನ ಮಾರಾಟ ಶೇ.5.48ರಷ್ಟು ಕುಗ್ಗಿದರೆ ಡಿಸೆಂಬರ್‌ನಲ್ಲಿ ಅದು ಇನ್ನಷ್ಟು ತಳಮಟ್ಟಕ್ಕೆ ಹೋಯಿತು. ಇದು ಕಳೆದ 43 ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಈ ಹಿಂದೆ 2013ರ ಮಾರ್ಚ್‌ನಲ್ಲಿ  ವಾಹನಗಳ ಒಟ್ಟು ಮಾರಾಟವು ಶೇ.7.75ರ ಕುಸಿತವನ್ನು ಕಂಡಿತ್ತು ಎಂದು ಅವರು ಹೇಳಿದ್ದಾರೆ.
SCROLL FOR NEXT