ಸೌರ ವಿದ್ಯುತ್ ದರದಲ್ಲಿ ದಾಖಲೆಯ ಇಳಿಕೆ: ಪ್ರತಿ ಯುನಿಟ್ ಗೆ 2.62 ರೂಪಾಯಿ
ಸೌರ ವಿದ್ಯುತ್ ದರದಲ್ಲಿ ದಾಖಲೆಯ ಇಳಿಕೆಯಾಗಿದ್ದು ಪ್ರತಿ ಯುನಿಟ್ ನ ದರ 2.62 ರೂಪಾಯಿಯಷ್ಟಾಗಿದೆ.
ನವದೆಹಲಿ: ಸೌರ ವಿದ್ಯುತ್ ದರದಲ್ಲಿ ದಾಖಲೆಯ ಇಳಿಕೆಯಾಗಿದ್ದು ಪ್ರತಿ ಯುನಿಟ್ ನ ದರ 2.62 ರೂಪಾಯಿಯಷ್ಟಾಗಿದೆ.
ಭಾದ್ಲಾ ಸೌರ ವಿದ್ಯುತ್ ಪಾರ್ಕ್ ಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ದರ ನಿಗದಿ ಪಡಿಸಲಾಗಿದ್ದು, ಎನ್ ಟಿಪಿಸಿಯ ಕಲ್ಲಿದ್ದಲು ಆಧಾರಿತ ವಿದ್ಯುತ್ ದರ (ಯುನಿಟ್ ಗೆ 3.02 ರೂಪಾಯಿ) ಗಿಂತ ಕಡಿಮೆ ದರ ಇದಾಗಿದೆ. ಭಾದ್ಲಾದ 4ನೇ ಫೇಸ್ ಸೌರ ವಿದ್ಯುತ್ ಪಾರ್ಕ್ ಅತ್ಯಂತ ಕಡಿಮೆ ಸೌರ ವಿದ್ಯುತ್ ದರವನ್ನು ನಿಗದಿಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, 50 ಮೆಗಾವ್ಯಾಟ್ ನ ಫೆಲಾನ್ ಎನರ್ಜಿ ಹಾಗೂ 100 ಮೆಗಾ ವ್ಯಾಟ್ ನ ಅವಾಡಾ ಪವರ್ ಸೌರ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಪ್ರತಿ ಯುನಿಟ್ ಗೆ 2.62 ರೂಪಾಯಿಗಳಿಗೆ ಪಡೆದಿದ್ದು ಸಾಫ್ಟ್ ಬ್ಯಾಂಕ್ ಕ್ಲೀನ್ ಟೆಕ್ 100 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಪ್ರತಿ ಯುನಿಟ್ ಗೆ 2.63 ರೂಪಾಯಿಯಂತೆ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹರಾಜು ಪ್ರಕ್ರಿಯೆ ಬಳಿಕ ಟ್ವೀಟ್ ಮಾಡಿರುವ ಇಂಧನ ಸಚಿವ ಪಿಯೂಷ್ ಗೋಯೆಲ್, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವದ ಎಲ್ಲರಿಗೂ ಕೈಗೆಟುಕುವ ವಿದ್ಯುತ್ ಪೂರೈಕೆಯಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಿದ್ದು ಪ್ರತಿ ಯುನಿಟ್ ಗೆ 2.62 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದರು. ಕಳೆದ ತಿಂಗಳು ಆಂಧ್ರಪ್ರದೇಶದ ಕಡಪದಲ್ಲಿ 250 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಯೋಜನೆಯ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಯುನಿಟ್ ಸೌರ ವಿದ್ಯುತ್ ಗೆ 3.15 ರೂಪಾಯಿ ನಿಗದಿಪಡಿಸಲಾಗಿತ್ತು.
ಇದಕ್ಕೂ ಮುನ್ನ ಮಧ್ಯಪ್ರದೇಶದ ರೇವಾ ಸೋಲಾರ್ ಪಾರ್ಕ್ ನಲ್ಲಿ 750 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯ ಯೋಜನೆಯಲ್ಲಿ ಪ್ರತಿ ಯುನಿಟ್ ಗೆ 2.97 ರೂಪಾಯಿ ನಿಗದಿಪಡಿಸಲಾಗಿತ್ತು ಹಾಗೂ ಇದೇ ಅತ್ಯಂತ ಕಡಿಮೆ ದರ ಎಂಬ ದಾಖಲೆ ನಿರ್ಮಾಣವಾಗಿತ್ತು.