ನವದೆಹಲಿ: ಕಳೆದ ಐದು ತ್ರೈಮಾಸಿಕಗಳಿಂದ ಕುಸಿಯುತ್ತ ಸಾಗಿದ್ದ ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ), ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ(ಜುಲೈ– ಸೆಪ್ಟೆಂಬರ್)ದಲ್ಲಿ ಜಿಡಿಪಿ ಶೇ 6.3ಕ್ಕೆ ಏರಿಕೆಯಾಗಿದೆ.
ನೋಟು ನಿಷೇಧದ ಬೆನ್ನಲ್ಲೆ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಆರಂಭಿಕ ದಿನಗಳಲ್ಲಿನ ಗೊಂದಲದ ಪರಿಣಾಮವಾಗಿ ತಯಾರಿಕಾ ಚಟುವಟಿಕೆಗಳು ಕುಂಠಿತಗೊಂಡಿದ್ದರಿಂದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ. 5.7ಕ್ಕೆ ಕುಸಿತ ಕಂಡಿತ್ತು.
ಕೇಂದ್ರೀಯ ಸಾಂಖ್ಯಿಕ ಕಚೇರಿ ಇಂದು ಜುಲೈ– ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ದರವನ್ನು ಪ್ರಕಟಿಸಿದ್ದು, ಶೇ 6.3ಕ್ಕೆ ಏರಿಕೆಯಾಗಿದೆ.
ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿ ನಂತರ ತಯಾರಿಕಾ ಚಟುವಟಿಕೆಗಳು ಮಂದಗತಿಯಲ್ಲಿ ಇದ್ದ ಕಾರಣಕ್ಕೆ ಸತತ ಐದು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಇಳಿಮುಖವಾಗಿ ಸಾಗಿದ್ದು, ಇದೀಗ ತಯಾರಿಕಾ ಚಟುವಟಿಕೆಗಳು ಚುರುಕುಗೊಂಡ ಹಿನ್ನೆಲೆಯಲ್ಲಿ ಮತ್ತೆ ಜಿಡಿಪಿ ಏರಿಕೆಯಾಗುತ್ತಿದೆ.
2016–17ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವೃದ್ಧಿ ದರವು ಶೇ 7.9ರಷ್ಟಿತ್ತು. 2014ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ 4.6ರಷ್ಟಿತ್ತು.