ಮೊಬೈಲ್ ಕರೆ ಸಂಪರ್ಕ ಶುಲ್ಕ 6 ಪೈಸೆಗೆ ಇಳಿಕೆ,
ನವದೆಹಲಿ: ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಸಂಪರ್ಕ ಶುಲ್ಕವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂದು ಇಳಿಕೆ ಮಾಡಿದೆ.
ಈ ಹಿಂದೆ 14 ಪೈಸೆ ಅಷ್ಟಿದ್ದ ಕರೆ ಸಂಪರ್ಕ ಶುಲ್ಕವನ್ನು 6 ಪೈಸೆಗೆ ಇಳಿಸಲಾಗಿದೆ. ಕರೆ ಸಂಪರ್ಕ ಶುಲ್ಕ ಇಳಿಕೆಯಾಗಿರುವುದರಿಂದ ಸ್ಥಳೀಯ ಕರೆಗಳ ಶುಲ್ಕದಲ್ಲಿ ಅಲ್ಪ ಪ್ರಮಾಣದ ಇಳಿಕೆಗೆ ಅವಕಾಶ ಆಗಲಿದೆ.
ಹೊಸ ದರಗಳು ಅ.1ರಿಂದ ಜಾರಿಗೆ ಬರಲಿದೆ.
ಅದೇ ವೇಳೆ 2020ರ ಜ.1ರಿಂದ ಕರೆ ಸಂಪರ್ಕ ಶುಲ್ಕವನ್ನು ಸಂಪೂರ್ಣವಾಗಿ ತೆಗೆದು ಹಾಕುವುದಾಗಿ ಟ್ರಾಯ್ ತಿಳಿಸಿದೆ.
ಕರೆ ಸಂಪರ್ಕ ಶುಲ್ಕವನ್ನು ಹೆಚ್ಚಿಸಬೇಕು ಎಂಬುದಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಸೇರಿದಂತೆ ಪ್ರಮುಖ ಮೊಬೈಲ್ ಸಂಪರ್ಕ ಸೇವಾ ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ ಈ ಶುಲ್ಕ ಇಳಿಸಬೇಕು, ಶುಲ್ಕ ಇಳಿಕೆಯಾದರೆ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ರಿಲಾಯನ್ಸ್ ಜಿಯೊ ವಾದಿಸಿತ್ತು.
ಕರೆ ಸಂಪರ್ಕ ಶುಲ್ಕ ಎಂದರೇನು?
ಮೊಬೈಲ್ ಸಂಸ್ಥೆಯೊಂದರ ಗ್ರಾಹಕನು ಇನ್ನೊಂದು ಮೊಬೈಲ್ ಸಂಸ್ಥೆಯ ಗ್ರಾಹಕನಿಗೆ ಕರೆ ಮಾಡುವಾಗ ಈ ಕಂಪನಿಗಳ ನಡುವಿನ ಕರೆಗೆ ನಿರ್ದಿಷ್ಟ ಶುಲ್ಕವನ್ನು ಮೊಬೈಲ್ ಸಂಸ್ಥೆ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕನು ಏರ್‍ಟೆಲ್ ಸಂಖ್ಯೆಗೆ ಕರೆ ಮಾಡಿದರೆ ಈ ಕರೆ ಕನೆಕ್ಟ್ ಆಗಲು ಜಿಯೋ, ಏರ್‍ಟೆಲ್ ಗೆ ನಿರ್ದಿಷ್ಚ ಶುಲ್ಕವನ್ನು ನೀದಬೇಕಾಗುತ್ತದೆ. ಈ ನಿರ್ದಿಷ್ಟ ಶುಲ್ಕಕ್ಕೆ ಕರೆ ಸಂಪರ್ಕ ಶುಲ್ಕ ಎನ್ನಲಾಗುತ್ತದೆ.