ಮುಂಬೈ: ಭಾರತದ ಇ-ಕಾಮರ್ಸ್ ಸಂಸ್ಥೆ ಪ್ಲಿಪ್ ಕಾರ್ಟ್ ನ ಶೇ.51 ರಷ್ಟು ಪಾಲನ್ನು ವಾಲ್ಮಾರ್ಟ್ ಸಂಸ್ಥೆ ಖರೀದಿಸಲಿದ್ದು, ಒಂದೆರಡು ವಾರಗಳಲ್ಲಿ ಪ್ರತಿಕ್ರಿಯೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ಇರುವ 2 ಮೂಲಗಳು ಮಾಧ್ಯಮಗಳಿಗೆ ಸುಳಿವು ನೀಡಿವೆ. ಪ್ಲಿಪ್ ಕಾರ್ಟ್ ನಲ್ಲಿ ಶೇ.51 ರಷ್ಟು ಪಾಲನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ವಾಲ್ ಮಾರ್ಟ್ ಕೆಲವು ತಿಂಗಳುಗಳಿಂದ ಮಾತುಕತೆಯಲ್ಲಿ ತೊಡಗಿದ್ದು ಈ ಮೂಲಕ ಭಾರತದಲ್ಲಿ ಅಮೇಜಾನ್ ಗೆ ಪೈಪೋಟಿ ನೀಡುವ ಉದ್ದೇಶ ಹೊಂದಿದೆ.
ಪ್ಲಿಪ್ ಕಾರ್ಟ್ ನಲ್ಲಿ ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ಸಮೂಹ ಸಂಸ್ಥೆ ಸಹ ಪಾಲುದಾರಿಕೆ ಹೊಂದಿದ್ದು, ವಾಲ್ ಮಾರ್ಟ್ ಷೇರುಗಳಿಗೆ 12 ಬಿಲಿಯನ್ ಮೊತ್ತವನ್ನು ನಿಗದಿಪಡಿಸಿದ್ದನ್ನು ಕಡಿಮೆಯೆಂದು ಡೀಲ್ ನ್ನು ನಿರಾಕರಿಸಿತ್ತು. ಆದರೆ ಈಗ ಸಾಫ್ಟ್ ಬ್ಯಾಂಕ್ ಹಾಗೂ ವಾಲ್ಮಾರ್ಟ್ ನಡುವೆ ಒಮ್ಮತ ಮೂಡಿದ್ದು ಈ ಹಿಂದೆ ಇದ್ದ ಅಡ್ಡಿ ಬಗೆಹರಿದಂತಾಗಿದೆ.
ಫ್ಲಿಪ್ ಕಾರ್ಟ್ ನಲ್ಲಿರುವ ಹಲವು ಸಹಭಾಗಿತ್ವದ ಸಂಸ್ಥೆಗಳು ತಮ್ಮ ಷೇರುಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಿವೆ ಎಂದೂ ರಾಯಿಟರ್ಸ್ ವರದಿ ಪ್ರಕಟಿಸಿದೆ. 2007 ರಲ್ಲಿ ಅಮೇಜಾನ್ ನಿಂದ ಹೊರಬಂದು ಫ್ಲಿಪ್ ಕಾರ್ಟ್ ನ್ನು ಸ್ಥಾಪಿಸಿದ್ದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಸಹ ತಮ್ಮ ಷೇರುಗಳಲ್ಲಿ ಒಂದಷ್ಟು ಭಾಗವನ್ನು ಮಾರಾಟ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗೆಗಿನ ಮಾತುಕತೆ ಇನ್ನೂ ಬಹಿರಂಗವಾಗಿಲ್ಲ.