ವೈಯಕ್ತಿಕ ಸಾಲದ ಮೇಲೂ ತೆರಿಗೆ ವಿನಾಯಿತಿಗಳನ್ನು ಪಡೆದುಕೊಳ್ಳಬಹುದೇ? ನೀವು ತಿಳಿದುಕೊಳ್ಳಬೇಕಾದ ಅಂಶಗಳು
ನವದೆಹಲಿ: ಸಾಮಾನ್ಯವಾಗಿ ಎಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ವೈಯಕ್ತಿಕ ಸಾಲ ಪಡೆಯುತ್ತಾರೆ. ಹೀಗೆ ವೈಯಕ್ತಿಕ ಅಗತ್ಯತೆಗಳಿಗಾಗಿ ಪಡೆಯುವ ಸಾಲಕ್ಕೆ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಬಹುತೇಕರು ತಿಳಿದಿದ್ದಾರೆ.
ಆದರೆ ವೈಯಕ್ತಿಕ ಸಾಲ ಪಡೆದರೂ ಸಹ ಒಂದಷ್ಟು ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ಕೆಲವು ನಿಬಂಧನೆಗಳು ಹಾಗೂ ನಿಯಮಗಳು ಅನ್ವಯವಾಗುತ್ತೆ.
ಯಾವುದೇ ಆಧಾರ ಅಥವಾ ಸೆಕ್ಯುರಿಟಿ ಇಲ್ಲದೇ ನೀಡಲಾಗುವ ವೈಯಕ್ತಿಕ ಸಾಲದ ಮೊತ್ತವನ್ನು ನಿರ್ದಿಷ್ಟ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ವೈಯಕ್ತಿಕ ಸಾಲದಿಂದ ಬಂದ ಹಣವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ:
ವೈಯಕ್ತಿಕ ಸಾಲದ ಹಣವನ್ನು ಮನೆ ಖರೀದಿಗೆ ಬಳಸಿದರೆ ತೆರಿಗೆ ವಿನಾಯಿತಿ: ಕೆಲವು ವಿಶೇಷ ಸಂದರ್ಭಗಳಲ್ಲಿ ವೈಯಕ್ತಿಕ ಸಾಲದ ಮೇಲೆಯೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಈ ಪೈಕಿ ಮನೆ ಖರೀದಿಯೂ ಒಂದು, ಪಡೆದಿರುವ ಸಾಲವನ್ನು ಮನೆ ಖರೀದಿಗೆ ಬಳಕೆ ಮಾಡಿರುವುದಕ್ಕೆ ದಾಖಲೆ ಒದಗಿಸಿದರೆ ಆದಾಯ ತೆರಿಗೆಯ ನಿಯಮಗಳ ಸೆಕ್ಷನ್ 24(ಬಿ) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ ಎಂದು Qbera.com ನ ಸ್ಥಾಪಕ, ಸಿಇಒ ಆದಿತ್ಯ ಕುಮಾರ್ ಹೇಳಿದ್ದಾರೆ. ಆದರೆ ತೆರಿಗೆ ವಿನಾಯಿತಿಯನ್ನು ಬಡ್ಡಿಯ ಭಾಗದಲ್ಲಿ ಪಡೆಯಬಹುದೇ ಹೊರತು ಬಂಡವಾಳ(ಸಾಲ ಸ್ವೀಕರಿಸಿರುವ ಮೊತ್ತ)ಕ್ಕೆ ಅನುಗುಣವಾಗಿ ಪಡೆಯಲು ಸಾಧ್ಯವಿಲ್ಲ. ಗರಿಷ್ಠ 2,00,000 ವರೆಗೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ ಎಂದು ಆದಿತ್ಯ ಕುಮಾರ್ ಹೇಳಿದ್ದಾರೆ.
ಶಿಕ್ಷಣ: ಉನ್ನತ ಶಿಕ್ಷಣಕ್ಕಾಗಿ ಪಡೆಯುವ ವೈಯಕ್ತಿಕ ಸಾಲದ ಮೇಲೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದ್ದು ಗರಿಷ್ಠ 1.5 ಲಕ್ಷ ರೂಗಳ ಮಿತಿ ಹಾಕಲಾಗಿದೆ. ಇದು ಸಾಲ ಪಡೆಯುವ ವ್ಯಕ್ತಿ, ಆತ/ ಆಕೆಯ ಪತಿ/ ಪತ್ನಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಡೆಯುವ ಸಾಲದ ಮೊತ್ತದ ಬಡ್ಡಿ ಪಾವತಿಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.
ಮನಿಟ್ಯಾಪ್ ನ ಸಹ ಸಂಸ್ಥಾಪಕ, ಉದ್ಯಮ ವಿಭಾಗದ ಅಧಿಕಾರಿ ಕುನಾಲ್ ವರ್ಮಾ ಅವರ ಪ್ರಕಾರ ಹಲವು ಉದ್ಯಮಿಗಳು, ಸ್ಟಾರ್ಟ್ ಅಪ್ ಮಾಲಿಕರು, ಸಣ್ಣ ಸಂಸ್ಥೆಗಳ ಮಾಲಿಕರು ಉದ್ಯಮ ಸಾಲಕ್ಕಿಂತ ಹೆಚ್ಚು ವೈಯಕ್ತಿಕ ಸಾಲ ಪಡೆಯುವುದಕ್ಕೆ ಬಯಸುತ್ತಾರೆ. ವೈಯಕ್ತಿಕ ಸಾಲ ಪಡೆದು ಹೂಡಿಕೆ ಮಾಡಿರುವ ಹಣದಿಂದ ಉದ್ಯಮಕ್ಕೆ ಸಂಬಂಧಿಸಿದ ಖರ್ಚನ್ನು ಮಾಡಿದರೆ ಉದ್ಯಮದ ಖರ್ಚೆಂದೇ ಪರಿಗಣಿಸಿ ಬಡ್ಡಿ ವಿಧಿಸಲಾಗುತ್ತದೆ, ಹಾಗೂ ಸಂಸ್ಥೆಯ ಲಾಭದ ಭಾಗದಲ್ಲಿ ಅದನ್ನು ವಾಪಸ್ ಪಡೆಯಲಾಗುತ್ತದೆ. ಈ ಮೂಲಕ ಆದಾಯ ತೆರಿಗೆಯನ್ನೂ ಕಡಿಮೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಚಿನ್ನಾಭರಣ, ಮನೆ-ನಿವೇಶನಕ್ಕೆ ಹೊರತಾದ ಆಸ್ತಿಗಳನ್ನು ಖರೀದಿಸುವುದರಿಂದ ಅದರ ಮೇಲಿನ ಬಡ್ಡಿಯನ್ನು ಆಸ್ತಿ ಸ್ವಾಧೀನ ವೆಚ್ಚದ ವ್ಯಾಪ್ತಿಯಲ್ಲಿ ಸೇರುವುದರಿಂದ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.