ಸಿಂಗಾಪುರ್/ದೋಹಾ: ಅಮೆರಿಕ ಮತ್ತು ಚೀನಾ 'ವಾಣಿಜ್ಯ ಕದನ ವಿರಾಮ' ಘೋಷಿಸಿದ್ದು, ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದನ್ನು 90 ದಿನಗಳವರೆಗೆ ಸ್ಥಗಿತಗೊಳಿಸಲು ಅಮೆರಿಕ ನಿರ್ಧರಿಸಿದೆ. ಇದರ ಬೆನ್ನಲ್ಲೇ ತೈಲ ಬೆಲೆ ಶೇ.5ರಷ್ಟು ಹೆಚ್ಚಳವಾಗಿದೆ ಮತ್ತು 2019ರ ಜನವರಿಯಿಂದ ಪೆಟ್ರೋಲಿಯಂ ಪೂರೈಕೆ ರಾಷ್ಟ್ರಗಳ ಒಕ್ಕೂಟದ (ಒಪೆಕ್)ದಿಂದ ಕತಾರ್ ಹಿಂದೆ ಸರಿಯಲಿದೆ ಎಂದು ಕಾತರ್ ಇಂಧನ ಸಚಿವ ಸಾದ್ ಅಲ್ ಕಾಬಿ ಹೇಳಿದ್ದಾರೆ.
ಅನಿಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚು ಗಮನಹರಿಸುವುದಕ್ಕಾಗಿ ಮುಂದಿನ ತಿಂಗಳಿಂದ ಒಪೆಕ್ ನಿಂದ ಹೊರ ಬರುತ್ತಿರುವುದಾಗಿ ಕತಾರ್ ಸಚಿವರು ತಿಳಿಸಿದ್ದಾರೆ.
ಜಾಗತಿಕ ತೈಲೋತ್ಪದನೆಯಲ್ಲಿ ಸಣ್ಣ ಮಟ್ಟದ ಕೊಡುಗೆಯಿದ್ದರೂ, ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ಉತ್ಪಾದಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕತಾರ್ ಮುಂದಿನ ದಿನಗಳಲ್ಲಿ ಅನಿಲ ಕ್ಷೇತ್ರದಲ್ಲಿ ಮತ್ತಷ್ಟು ಗಮನಹರಿಸಲು ನಿರ್ಧರಿಸಿದ್ದು, ವ್ಯೂಹಾತ್ಮಕ ಹೆಜ್ಜೆಗಳನ್ನು ಇಡಲಿದೆ ಎಂದು ಹೇಳಿದ್ದಾರೆ.
ಕತಾರ್ 1961ರಿಂದ ಒಪೆಕ್ ಒಕ್ಕೂಟದಲ್ಲಿ ಇದ್ದರೂ, ಉತ್ಪಾದನೆ ಸಂಬಂಧ ನೀತಿ ರೂಪಣೆಯಲ್ಲಿ ಕತಾರ್ ಪಾತ್ರ ಬಹಳ ಚಿಕ್ಕದಾಗಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ಕಡಿತ ಮಾಡುವ ಉದ್ದೇಶದಿಂದ ತೈಲೋತ್ಪಾದಕ ದೇಶಗಳೆಲ್ಲಾ ಇದೇ ಡಿಸೆಂಬರ್ 6-7ರಂದು ಸಭೆ ಸೇರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಘಟಿಸಿದೆ.
ವಾರ್ಷಿಕ 77 ದಶಲಕ್ಷ ಟನ್‌ನಷ್ಟಿರುವ ಕತಾರ್ ತೈಲೋತ್ಪಾದನೆಯನ್ನು ಮುಂದಿನ ದಿನಗಳಲ್ಲಿ 110 ದಶಲಕ್ಷ ಟನ್‌ಗೆ ಏರಿಕೆ ಮಾಡಲು ದೋಹಾ ಚಿಂತನೆ ನಡೆಸುತ್ತಿದೆ.
ಜೂನ್ 2017ರಲ್ಲಿ ಸೌದಿ ಅರೇಬಿಯಾ ಹಾಗು ಇನ್ನಿತರ ದೇಶಗಳು ಕತಾರ್ ಮೇಲೆ ವಿಧಿಸಿರುವ ನಿರ್ಬಂಧಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾದ್ ಅಲ್ ಕಾಬಿ ಅವರು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos