ಮುಂಬರುವ ದಿನಗಳಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ ದರ ಕಡಿತ: ಹಸ್ಮುಕ್ ಆದಿಯಾ
ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದ ನಂತರ ಕಾರ್ಪೊರೇಟ್ ಆದಾಯ ...
ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದ ನಂತರ ಕಾರ್ಪೊರೇಟ್ ಆದಾಯ ತೆರಿಗೆ ದರವನ್ನು ತಗ್ಗಿಸಲಾಗುವುದು ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಹಸ್ಮುಕ್ ಆದಿಯಾ ತಿಳಿಸಿದ್ದಾರೆ.
ಕಾರ್ಪೊರೇಟ್ ಆದಾಯ ತೆರಿಗೆ ಪಾವತಿಯಲ್ಲಿ ಕಡಿಮೆ ಮಾಡಬೇಕು ಎಂದು ಒತ್ತಾಯ ಕೇಳಲ್ಪಟ್ಟಾಗ ಸರ್ಕಾರಕ್ಕೂ ಕಾರ್ಪೋರೇಟ್ ತೆರಿಗೆ ದರವನ್ನು ಕಡಿಮೆ ಮಾಡುವ ಯೋಜನೆಯಿತ್ತು. ಆದರೆ ಇಂದು ಬಹುತೇಕ ರಾಷ್ಟ್ರಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ಪಾವತಿ ಕಾರ್ಪೋರೇಟ್ ಆದಾಯ ತೆರಿಗೆ ದರಕ್ಕೆ ಹೋಲಿಸಿದರೆ ತುಂಬಾ ಹೆಚ್ಚಾಗಿದೆ.
ಆದರೆ ಭಾರತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಹೆಚ್ಚಾಗಬೇಕು. ಒಂದು ಬಾರಿ ಅದು ಹೆಚ್ಚಾದರೆ ಕಾರ್ಪೋರೇಟ್ ಆದಾಯ ತೆರಿಗೆಯನ್ನು ಕಡಿಮೆ ಮಾಡಲು ಅವಕಾಶವಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಹಸ್ಮುಕ್ ಆದಿಯಾ ತಿಳಿಸಿದರು.
ಆದರೆ ಅಲ್ಲಿಯವರೆಗೆ ಕಾರ್ಪೋರೇಟ್ ವಲಯದಲ್ಲಿ ಯಾರ ವಹಿವಾಟು ವರ್ಷಕ್ಕೆ 500 ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿರುತ್ತದೆಯೋ ಅವರಿಗೆ ಶೇಕಡಾ 24ರಷ್ಟು ತೆರಿಗೆ ದರವಿರುತ್ತದೆ.
ಮೊನ್ನೆ ಫೆಬ್ರವರಿ 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಬಜೆಟ್ ನಲ್ಲಿ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮತ್ತು ಸಡಿಲತೆ ಮಾಡದಿರಲು ನಿರ್ಧರಿಸಿದ್ದಾರೆ.
ಅದಕ್ಕೆ ಬದಲಾಗಿ ಮೊನ್ನೆಯ ಬಜೆಟ್ ನಲ್ಲಿ ವರ್ಷಕ್ಕೆ 250 ಕೋಟಿ ರೂಪಾಯಿ ವಹಿವಾಟು ಮಾಡುವ ಕಾರ್ಪೊರೇಟ್ ಕಂಪೆನಿಗಳ ಆದಾಯ ತೆರಿಗೆ ದರದಲ್ಲಿ ಶೇಕಡಾ 25ರಷ್ಟು ಕಡಿತ ಮಾಡಿದೆ. 2015ರಲ್ಲಿ 4 ವರ್ಷಗಳಲ್ಲಿ ಕಾರ್ಪೊರೇಟ್ ವಲಯಗಳ ತೆರಿಗೆ ಪಾವತಿ ದರವನ್ನು ಶೇಕಡಾ 25ರಿಂದ 30ರಷ್ಟು ಕಡಿತ ಮಾಡಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಅರುಣ್ ಜೇಟ್ಲಿ ಪ್ರಕಟಿಸಿದ್ದರು.