ವಾಣಿಜ್ಯ

ರೆಪೊ ದರ ಶೇಕಡಾ 6ರ ಯಥಾಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್

Sumana Upadhyaya
ಮುಂಬೈ: ರಿಸರ್ವ್ ಬ್ಯಾಂಕ್ ಸತತ ಮೂರನೇ ಬಾರಿಗೆ ರೆಪೊ ದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರ ಶೇಕಡಾ 6ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ದ್ವೈಮಾಸಿಕ ನೀತಿ ಪರಿಶೀಲನೆಯಲ್ಲಿ ತಟಸ್ಥ ನಿಲುವು ಉಳಿಸಿಕೊಂಡಿದೆ. 
ಕಳೆದ 17 ತಿಂಗಳಲ್ಲಿ ಹಣದುಬ್ಬರ ಗರಿಷ್ಟ ಮಟ್ಟಕ್ಕೆ ಏರಿದ್ದರೂ ಕೂಡ ಕುಂಠಿತಗೊಂಡಿರುವ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ.
ರಿಸರ್ವ್ ಬ್ಯಾಂಕಿನ ವಿತ್ತೀಯ ನೀತಿ ಸಮಿತಿಯ ಐವರು ಸದಸ್ಯರು ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ ಹಾಕಿದರು. ಒಬ್ಬ ಸದಸ್ಯ ಮೈಕೆಲ್ ಪಟ್ರಾ ಎನ್ನುವವರು ಮಾತ್ರ 25 ಅಂಕಗಳಷ್ಟು ಏರಿಕೆ ಮಾಡುವಂತೆ ಸೂಚಿಸಿದ್ದರು.
ಇಂದು ತನ್ನ ಕೊನೆಯ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್ ಬಿಐ, ತಾನು ತಟಸ್ಥ ನಿಲುವು ಹೊಂದಿದ್ದು ಸರಾಸರಿ ಹಣದುಬ್ಬರ ಗುರಿಯ ಶೇಕಡಾ 4 ರಷ್ಟನ್ನು ತಲುಪಲು ಇದು ಮುಖ್ಯವಾಗಿದೆ ಎಂದರು.
ಆಹಾರ ಮತ್ತು ಇಂಧನ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದರಿಂದ ಭಾರತದ ವಾರ್ಷಿಕ ಚಿಲ್ಲರೆ ಹಣದುಬ್ಬರ ಕಳೆದ ಡಿಸೆಂಬರ್ ನಲ್ಲಿ ಶೇಕಡಾ 5ರಿಂದ ಶೇಕಡಾ 5.21ಕ್ಕೆ ಏರಿಕೆಯಾಗಿದೆ. ನವೆಂಬರ್ ನಲ್ಲಿ ಶೇಕಡಾ 4.88ರಷ್ಟಿತ್ತು.
ರಾಯ್ಟರ್ಸ್ ಸಂಸ್ಥೆಯ ಸಮೀಕ್ಷೆಯಲ್ಲಿ 60ರಲ್ಲಿ ಇಬ್ಬರು ಹೊರತುಪಡಿಸಿ ಮತ್ತೆಲ್ಲಾ ಆರ್ಥಿಕ ತಜ್ಞರು ನವೆಂಬರ್ 2010ರಿಂದ ರೆಪೊ ದರವನ್ನು ಕನಿಷ್ಟ ಮಟ್ಟದಲ್ಲಿ ಇಡಲಾಗಿದೆ ಎಂದಿದ್ದಾರೆ.
ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಹಣಕ್ಕೆ ವಿಧಿಸುವ ಬಡ್ಡಿದರ ರೆಪೊ ದರ ಮತ್ತು ರಿವರ್ಸ್ ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕುಗಳಿಂದ ಆರ್ ಬಿಐ ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ.
SCROLL FOR NEXT