ವಾಣಿಜ್ಯ

ಪಿಎನ್ ಬಿಯಲ್ಲಿ ಭಾರೀ ಹಗರಣ : 52 ವಾರಗಳಲ್ಲಿ ಸತತ ಮೂರನೇ ದಿನ ಷೇರುಪೇಟೆ ಕುಸಿತ

Sumana Upadhyaya
ನವದೆಹಲಿ: ಸತತ ಮೂರನೇ ದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಷೇರು ಸಂವೇದಿ ಸೂಚ್ಯಂಕ ಕುಸಿತ ಕಂಡುಬಂದಿದ್ದು ಇಂದು ಬೆಳಗಿನ ವಹಿವಾಟು ಆರಂಭಕ್ಕೆ ವಿದೇಶಿ ಷೇರು ಮಾರುಕಟ್ಟೆಯಲ್ಲಿ ಶೇಕಡಾ 3ರಷ್ಟು ಕುಸಿತ ಕಂಡುಬಂದಿದೆ. 
ಕಳೆದ 52 ವಾರಗಳಲ್ಲಿ ಮುಂಬೈ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕದಲ್ಲಿ ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಶೇಕಡಾ 3. 27 ಕಡಿಮೆಯಾಗಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 124.15ರಷ್ಟು ಕುಸಿತ ಕಂಡುಬಂತು.
ರಾಷ್ಟ್ರೀಯ ಸಂವೇದಿ ಸೂಚ್ಯಂಕ ಕೂಡ 123.40 ರೂಪಾಯಿಗಳಷ್ಟು ಕುಸಿತ ಕಂಡುಬಂದಿದೆ.
ಈ ಮಧ್ಯೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ನ ಷೇರು ಶೇಕಡಾ 1.36ರಷ್ಟು ಕುಸಿತ ಕಂಡುಬಂದು 1,182.60ಯಷ್ಟಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯಲ್ಲಿ ಭಾರೀ ಹಗರಣ ಬೆಳಕಿಗೆ ಬರುತ್ತಿದ್ದಂತೆ ಪಿಎನ್ಬಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಮೆಹ್ತಾ, ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಮತ್ತು ಇತರರಿಂದ ಹಣ ಪಡೆದುಕೊಳ್ಳುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ನೀರವ್ ಮೋದಿಗೆ ಸೇರಿದ ಹಲವು ಕಂಪೆನಿಗಳ ಮೇಲೆ ನಿನ್ನೆ ಶೋಧ ನಡೆಸಿದ ಜಾರಿ ನಿರ್ದೇಶನಾಲಯ, ಅವರಿಗೆ ಸೇರಿದ ಸುಮಾರು 5,100 ಕೋಟಿ ರೂಪಾಯಿ ಬೆಲೆಬಾಳುವ ವಜ್ರ, ಆಭರಣಗಳ ಆರು ಮಳಿಗೆಗಳಿಗೆ ಬೀಗಮುದ್ರೆ ಹಾಕಿದೆ. ಇನ್ನು ಮುಂದೆ ಕೂಡ ವಶಪಡಿಸಿಕೊಳ್ಳುವ ಕೆಲಸ ಮುಂದುವರಿಯಲಿದ್ದು ಯಾರನ್ನೂ ಕೂಡ ಕಾನೂನು ಕ್ರಮದಿಂದ ವಿನಾಯ್ತಿ ನೀಡುವುದಿಲ್ಲ ಎಂದು ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗಾಗಲೇ ಹಗರಣಕ್ಕೆ ಸಂಬಂಧಪಟ್ಟಂತೆ 10 ಮಂದಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಯನ್ನು ಸಿಬಿಐಗೆ ವಹಿಸಿದೆ.
SCROLL FOR NEXT