ವಾಣಿಜ್ಯ

ಮತ್ತೊಂದು ಬ್ಯಾಂಕ್ ಹಗರಣ ವರದಿ: ಚೆನ್ನೈ ಎಸ್ ಬಿಐ ಬ್ಯಾಂಕಿನಿಂದ 3.29 ಕೋಟಿ ರೂ ದುರುಪಯೋಗ

Sumana Upadhyaya

ಚೆನ್ನೈ: ಸಾರ್ವಜನಿಕ ವಲಯ ಬ್ಯಾಂಕಿನ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು ಕಬಡ್ಡಿ ಆಟಗಾರ ಸೇರಿದಂತೆ 13 ಮಂದಿ ದುಬಾರಿ ಕಾರನ್ನು ಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೆನ್ನೈ ಶಾಖೆಯಿಂದ 3.29 ಕೋಟಿ ರೂಪಾಯಿ ಸಾಲ ಪಡೆದು ಅದನ್ನು ತಮಿಳು ಚಿತ್ರವೊಂದರ ನಿರ್ಮಾಣಕ್ಕೆ ಹೂಡಿಕೆ ಮಾಡಿರುವ ಪ್ರಕರಣ ವರದಿಯಾಗಿದೆ.

ಹಗರಣ ಬೆಳಕಿಗೆ ಬರುತ್ತಿದ್ದಂತೆ ಮದ್ರಾಸ್ ಹೈಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮನವಿ ಮೇರೆಗೆ ಸಿನಿಮಾ ಬಿಡುಗಡೆಗೆ ಅವಕಾ ಶ ನೀಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮಾರ್ಚ್ 16ರವರೆಗೆ ಚಿತ್ರ ಬಿಡುಗಡೆ ಮಾಡದಂತೆ ವೈಟ್ ಸ್ಕ್ರೀನ್ ಪ್ರೊಡಕ್ಷನ್ ಗೆ ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಸಿ.ವಿ.ಕಾರ್ತಿಕೇಯನ್ ಮಧ್ಯಂತರ ಆದೇಶ ನೀಡಿದ್ದಾರೆ.
ಪ್ರೊಡಕ್ಷನ್ ಹೌಸ್ ಕಬಡ್ಡಿ ಆಟಗಾರ ರಾಜಾ ಮತ್ತು ಇತರ 13 ಮಂದಿಗೆ ಸೇರಿದ್ದಾಗಿದೆ. ಸ್ಟೇಟ್ ಬ್ಯಾಂಕ್ ಪ್ರಕಾರ, ರಾಜಾ ಮತ್ತು ಇತರ 13 ಮಂದಿ ವಿವಿಧ ಕಾರುಗಳನ್ನು ಕೊಳ್ಳಲೆಂದು 3,29,71,000 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು.

ಆಟೊ ಸಾಲ ಸಲಹೆಗಾರ್ತಿ ಡಿ. ಚಿತ್ರಾ ಅವರ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅವರು ಸಂಬಂಧಪಟ್ಟ ದಾಖಲೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಲ್ಲಿಸಿದ್ದರು.
ಚಿತ್ರಾ ಅವರು ಬ್ಯಾಂಕಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲ ಮಂಜೂರು ಮಾಡಿಸಿಕೊಂಡಿದ್ದರು. ಆಕೆ ಬ್ಯಾಂಕಿಗೆ ತಪ್ಪು ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದರು.

ಅಕ್ರಮ ಮಾರ್ಗದ ಮೂಲಕ ಚಿತ್ರಾ ಕಂಪ್ಯೂಟರ್ ನ ನಿರ್ವಹಣೆ ವ್ಯವಸ್ಥೆಯನ್ನು ಪಡೆದು ಬ್ಯಾಂಕಿನ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಹ್ಯಾಕ್ ಮಾಡಿದ್ದಳು. ಸಾಲದ ಮೊತ್ತ ಕಾರು ವ್ಯಾಪಾರಿಗಳ ಖಾತೆಗೆ ಹೋಗದೆ ಸಾಲ ಪಡೆದುಕೊಂಡವರ ಖಾತೆಗೆ ನೇರವಾಗಿ ಹೋಗುವಂತೆ ಬದಲಾಯಿಸಿಕೊಂಡಿದ್ದಳು.

ಹಣ ಸಿಗುತ್ತಿದ್ದಂತೆ 13 ಮಂದಿ ಕಾರು ಕೊಳ್ಳುವ ಬದಲು ಅದನ್ನು ಸಿನಿಮಾ ನಿರ್ಮಾಣಕ್ಕೆ ಬಳಸಿಕೊಂಡರು. ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕರು ಈ ಸಾಲ ಪಡೆದುಕೊಂಡವರ ದಾಖಲೆಗಳನ್ನು ಪರೀಕ್ಷಿಸುವಾಗ ಹಣ ದುರ್ಬಳಕೆಯಾಗಿರುವುದು ಗಮನಕ್ಕೆ ಬಂದಿದೆ.
ತನಿಖೆ ವೇಳೆ ಚಿತ್ರಾ ಸಾಲ ನೀಡುವಿಕೆಯ ಸಾಫ್ಟ್ ವೇರ್ ನ ಯುಆರ್ ಎಲ್ ನ್ನು ಹ್ಯಾಕ್ ಮಾಡಿರುವುದು ಗಮನಕ್ಕೆ ಬಂದಿತು.

ಹೈಕೋರ್ಟ್ ಎಲ್ಲಾ 13 ಮಂದಿ ಸಾಲ ಪಡೆದವರು, ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ಕೇಸು ದಾಖಲಿಸುವಂತೆ ಆದೇಶ ನೀಡಿದ್ದರೂ ಕೂಡ ಪೊಲೀಸರು ಕೇಸು ದಾಖಲಿಸದ ಕಾರಣ ಬ್ಯಾಂಕು ಸಿವಿಲ್ ಸೂಟ್ ದಾಖಲಿಸಿದೆ.

SCROLL FOR NEXT