ವಾಣಿಜ್ಯ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಕೂಡಲೇ ಖಾಸಗೀಕರಣಗೊಳಿಸಿ: ನೀಲೇಕಣಿ

Lingaraj Badiger
ಮುಂಬೈ: ತಡ ಮಾಡದೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಬೇಕು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ ಎಂದು ಇನ್ಫೋಸಿಸ್‌ ಅಧ್ಯಕ್ಷ ಹಾಗೂ ಆಧಾರ್‌ ಯೋಜನೆಯ ರೂವಾರಿ ನಂದನ್‌ ನೀಲೇಕಣಿ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮಾರುಕಟ್ಟೆಯ ಷೇರು ಪ್ರಾಬಲ್ಯ ಕಳೆದುಕೊಳ್ಳುವ ಮೊದಲು ಅವುಗಳನ್ನು ಖಾಸಗೀಕರಣಗೊಳಿಸಬೇಕು. ಇದರಿಂದ ತೆರಿಗೆ ಪಾವತಿದಾರರು ಮತ್ತು ಸರ್ಕಾರದ ಬೊಕ್ಕಸಕ್ಕೆ ಲಾಭವಾಗಲಿದೆ ಎಂದು ನೀಲೇಕಣಿ ಹೇಳಿದ್ದಾರೆ. 
ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಪ್ರತಿ ವರ್ಷ ಶೇ. 4ರಷ್ಟು ಮಾರುಕಟ್ಟೆ ಷೇರು ಕಳೆದುಕೊಳ್ಳುತ್ತಿವೆ. ಇಂದು ಸಾರ್ವಜನಿಕ ಬ್ಯಾಂಕ್‌ಗಳ ಮಾರುಕಟ್ಟೆ ಷೇರು ಶೇ. 70ರಷ್ಟಿದೆ.  ಮುಂದಿನ ಹತ್ತು ವರ್ಷಗಳಲ್ಲಿ ಈ ಪ್ರಮಾಣ ಬಹಳಷ್ಟು ಕುಸಿಯಲಿದ್ದು, ಶೇ. 10ಕ್ಕೆ ತಲುಪಲಿದೆ ಎಂದು ನೀಲೇಕಣಿ ವಿಶ್ಲೇಷಿಸಿದ್ದಾರೆ.
ಸಾರ್ವಜನಿಕ ವಲಯ ಬ್ಯಾಂಕ್‌ಗಳು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಷೇರು ಪ್ರಾಬಲ್ಯ ಹೊಂದಿರುವುದರನ್ನು ಅದನ್ನು ಕೂಡಲೇ ಖಾಸಗೀಕರಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವುದು ಉತ್ತಮ ಎಂದು ನೀಲೇಕಣಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ದೂರಸಂಪರ್ಕ ವಲಯ ತಡವಾಗಿ ಖಾಸಗೀಕರಣಗೊಂಡಿದ್ದು, ಬಿಎಸ್‌ಎನ್‌ಎಲ್‌ ಅಷ್ಟೇನು ಆಕರ್ಷಣೀಯವಾಗಿ ಉಳಿದಿಲ್ಲ. ಈಗ ವಿಮಾನಯಾನ ಕ್ಷೇತ್ರದಲ್ಲೂ ಅದೇ ಆಗುತ್ತಿದೆ. ಮೌಲ್ಯ ಕಳೆದುಕೊಂಡ ಮೇಲೆ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಮಾತನಾಡುತ್ತಿದ್ದಾರೆ ಎಂದು ನೀಲೇಕಣಿ ಹೇಳಿದ್ದಾರೆ.
SCROLL FOR NEXT