ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಭಾರತದಲ್ಲಿ ಗುರುವಾರ ಪೆಟ್ರೋಲ್ ದರ 7 ಪೈಸೆ ಮತ್ತು ಡೀಸೆಲ್ ಬೆಲೆ 5 ಪೈಸೆಯಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 79 ರೂಪಾಯಿ63 ಪೈಸೆ, ಡೀಸೆಲ್ ಬೆಲೆ 70 ರೂಪಾಯಿ 44 ಪೈಸೆಯಷ್ಟಾಗಿದೆ.
ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 78 ರೂಪಾಯಿ 35 ಪೈಸೆಯಷ್ಟಾಗಿದೆ. ನಿನ್ನೆ ಇಲ್ಲಿ ಪೆಟ್ರೋಲ್ ದರ ಲೀಟರ್ ಗೆ 78 ರೂಪಾಯಿ 42 ಪೈಸೆಯಷ್ಟಿತ್ತು. ಡೀಸೆಲ್ ದರ 69 ರೂಪಾಯಿ 30 ಪೈಸೆಯಿಂದ 69 ರೂಪಾಯಿ 25 ಪೈಸೆಗೆ ಇಳಿಕೆಯಾಗಿದೆ.
ಪೆಟ್ರೋಲ್-ಡೀಸೆಲ್ ಬೆಲೆ ಕಳೆದ 16 ದಿನಗಳಲ್ಲಿ ಸತತ ಏರಿಕೆ ಕಂಡುಬಂದ ನಂತರ ದರದಲ್ಲಿ ಇಳಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಮೇ 14ರಿಂದ ಮೊನ್ನೆಯವರೆಗೆ ಪೆಟ್ರೋಲ್ ದರ ಲೀಟರ್ ಗೆ 3ರೂಪಾಯಿ 8 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 3 ರೂಪಾಯಿ 38 ಪೈಸೆಯಷ್ಟಾಗಿತ್ತು. ನಿನ್ನೆ ಕೇಂದ್ರ ಸರ್ಕಾರ ಕೇವಲ 1 ಪೈಸೆಯಷ್ಟು ಮಾತ್ರ ಇಂಧನದ ಬೆಲೆಯನ್ನು ಇಳಿಕೆ ಮಾಡಿತ್ತು.
ನಿನ್ನೆ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಅತಿ ಹೆಚ್ಚು ಲೀಟರ್ ಗೆ ಕ್ರಮವಾಗಿ 78.43 ಪೈಸೆ ಮತ್ತು ಡೀಸೆಲ್ ಗೆ 69 ರೂಪಾಯಿ 31 ಪೈಸೆಯಷ್ಟು ಏರಿಕೆ ಕಂಡುಬಂದಿತ್ತು.
ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಗನುಗುಣವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಬೇರೆ ಮೆಟ್ರೊ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ.