ಕಿಲೋಗ್ರಾಮ್ ಮಾಪನ ವಿಧಾನಕ್ಕೆ ಮೇ ತಿಂಗಳಿಂದ ಸಿಗಲಿದೆ ಹೊಸ ವ್ಯಾಖ್ಯಾನ!
ನವದೆಹಲಿ: ಮುಂದಿನ ವರ್ಷ ಮೇ ತಿಂಗಳಿನಿಂದ ಭಾರತ ಕಿಲೋಗ್ರಾಮ್ ಗೆ ಹೊಸ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಂಟರ್ನ್ಯಾಷನಲ್ ಸಿಸ್ಟಮ್ ಆಫ್ ಯುನಿಟ್ ನ್ನು ಮರುವ್ಯಾಖ್ಯಾನ ಮಾಡುವುದಕ್ಕೆ 60 ರಾಷ್ಟ್ರಗಳ ಪ್ರತಿನಿಧಿಗಳು ಕಳೆದ ವಾರ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಈಗ ಕಿಲೋಗ್ರಾಮ್ ಗೆ ಮೇ ತಿಂಗಳಿನಿಂದ ಹೊಸ ವ್ಯಾಖ್ಯಾನ ಅಳವಡಿಸಿಕೊಳ್ಳುವುದಕ್ಕೆ ತೀರ್ಮಾನಿಸಿದೆ.
ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳಲ್ಲಿ ನಿಖರತೆ ಕಂಡುಕೊಳ್ಳುವುದಕ್ಕೆ ಎಸ್ಐ ಸಿಸ್ಟಮ್ ನ ಮರುವ್ಯಾಖ್ಯಾನ ಸಹಕಾರಿಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಎ.ಕೆ ಶ್ರೀವಾಸ್ತವ ಹೇಳಿದ್ದಾರೆ.
ಈಗಿರುವ ಕೆಜಿ ವ್ಯಾಖ್ಯಾನ 130 ವರ್ಷಗಳಷ್ಟು ಹಳೆಯದ್ದು, ಹೊಸ ಎಸ್ಐ ವ್ಯವಸ್ಥೆ ಪ್ರಾಯೋಗಿಕವಾಗಿ ಗ್ರಹಿಸಬಹುದಾಗಿದ್ದು, ಮಾಪನಶಾಸ್ತ್ರ ದಿನದಂದು ವಿಶ್ವಾದ್ಯಂತ ಹೊಸ ಮಾನದಂಡವನ್ನು ಅಂಗೀಕರಿಸಲಾಗುತ್ತದೆ. ಕಿಬ್ಬಲ್ ಬ್ಯಾಲೆನ್ಸ್ ಎಂಬ ಯಂತ್ರದ ಮೂಲಕ ತೂಕವನ್ನು ಮಾಪನ ಮಾಡಲಿದೆ. ಇಲ್ಲಿ ಖ್ವಾಂಟಂ ಇಲೆಕ್ಟ್ರಿಕ್ ಎಫೆಕ್ಟ್ ಬಳಕೆಯಾಗಲಿದೆ.