ವಾಣಿಜ್ಯ

ಜೆಟ್‌ ಏರ್ ವೇಸ್‌ ಷೇರು ಖರೀದಿಗೆ 5 ಕಂಪನಿಗಳ ಆಸಕ್ತಿ

Srinivasamurthy VN
ನವದೆಹಲಿ: ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್ ವೇಸ್‌ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಜೆಟ್ ಏರ್ ವೇಸ್ ಸಂಸ್ಥೆಯ ಷೇರು ಖರೀದಿಗೆ ಆಸಕ್ತಿ ವ್ಯಕ್ತಪಡಿಸಲು (ಇಒಐ) ಶುಕ್ರವಾರ ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ಐದು ಪ್ರಮುಖ ಕಂಪನಿಗಳು ಇಂದು ಷೇರು ಖರೀದಿಗೆ ಆಸಕ್ತಿ ತೋರಿದ್ದು, ಅಬುಧಾಬಿ ಮೂಲದ ಎತಿಯಾದ್‌ ಏರ್ ವೇಸ್‌, ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಖಾಸಗಿ ಹೂಡಿಕೆ ಕಂಪನಿ ಟಿಪಿಜಿ ಕ್ಯಾಪಿಟಲ್‌, ನ್ಯಾಷನಲ್‌ ಇನ್ವೆಸ್ಟ್ ಮೆಂಟ್‌ ಆಂಡ್‌ ಇನ್ಫ್ರಾಸ್ಟ್ರಕ್ಚರ್‌ ಫಂಡ್‌ (ಎನ್‌ಐಐಎಫ್‌), ಇಂಡಿಗೊ ಪಾಲುದಾರ ಮತ್ತು ಥಿಂಕ್‌ ಈಕ್ವಿಟಿ ರೆಡಿಕ್ಲಿಫ್ ಕ್ಯಾಪಿಟಲ್‌ ಕಂಪನಿಗಳು ಷೇರು ಖರೀದಿಗೆ ಆಸಕ್ತಿ ತೋರಿಸಿವೆ. 
ಎತಿಯಾದ್‌ ಏರ್ ವೇಸ್ ಈಗಾಗಲೇ ಜೆಟ್‌ಏರ್ ವೇಸ್‌ನಲ್ಲಿ ಶೇ. 24ರಷ್ಟು ಷೇರು ಹೊಂದಿದ್ದು, ಎಸ್‌ಬಿಐ ನೇತೃತ್ವದ ಸಾಲ ನೀಡಿದವರು ಏ.30ರಂದು ಸೂಕ್ತವಾದ ಬಿಡ್ ದಾರರನ್ನು ನಿರ್ಧರಿಸಲಿದ್ದಾರೆ.
ಏಪ್ರಿಲ್ 8ರಂದು ಸಾಲ ನೀಡಿದವರು ಶೇ.75ರಷ್ಟು ಷೇರು ಖರೀದಿಗಾಗಿ ಇಒಐ ಆಹ್ವಾನಿಸಿದ್ದರು. ಜೆಟ್‌ ಏರ್ ವೇಸ್‌ನ 58.95 ಲಕ್ಷ ಷೇರುಗಳನ್ನು ಎಸ್‌ಬಿಐ ಕ್ಯಾಪ್‌ ಮೂಲಕ ಸಾಲ ನೀಡಿದವರಿಗೆ ಮಾರಾಟ ಮಾಡಿದೆ. ವಿಮಾನಯಾನ ಸಂಸ್ಥೆಯ ಷೇರು ಮಾರಾಟಕ್ಕೆ ಎಸ್ ಬಿಐ ಕ್ಯಾಪ್‌ ಅನ್ನು ಸಲಹೆಗಾರರನ್ನಾಗಿ ನೇಮಿಸಿದೆ ಎನ್ನಲಾಗಿದೆ.
ಇಂದು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯ ಸ್ಥಿತಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ ಸಿಂಗ್ ಗೆ ಸೂಚಿಸಿದ್ದಾರೆ.
SCROLL FOR NEXT