ವಾಣಿಜ್ಯ

ಡೆಬಿಟ್ ಕಾರ್ಡ್ ಸೇವೆ ಸಂಪೂರ್ಣ ಸ್ಥಗಿತಕ್ಕೆ ಮುಂದಾದ ಎಸ್ ಬಿಐ

Srinivasamurthy VN

ಡೆಬಿಟ್ ಕಾರ್ಡ್ ಬದಲಿಗೆ ಯೋನೊ ಡಿಜಿಟಲ್‌ ಸೇವೆ ಆರಂಭಿಸಿರುವ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ

ನವದೆಹಲಿ: ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಶೀಘ್ರದಲ್ಲೇ ತನ್ನ ಎಲ್ಲ ಡೆಬಿಟ್ ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಹೌದು... ಮುಂಬರುವ ದಿನಗಳಲ್ಲಿ ಡೆಬಿಟ್‌ ಕಾರ್ಡ್‌ಗಳ ಬಳಕೆಯನ್ನು ಕ್ರಮೇಣ ಸ್ಥಗಿತಗೊಳಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಉದ್ದೇಶಿಸಿದ್ದು, ಎಟಿಎಂಗಳಿಂದ ನಗದು ಪಡೆಯಲು, ವ್ಯಾಪಾರ ವಹಿವಾಟಿಗೆ ಹಣ ಪಾವತಿಸಲು ಬ್ಯಾಂಕ್‌ ನ ಅಸಂಖ್ಯ ಗ್ರಾಹಕರು ಡೆಬಿಟ್‌ ಕಾರ್ಡ್‌ ಗಳನ್ನೇ ನೆಚ್ಚಿಕೊಂಡಿದ್ದರೂ, ನಗದುರಹಿತ (ಡಿಜಿಟಲ್‌) ಪಾವತಿ ಸೇವೆ ಉತ್ತೇಜಿಸಲು ಮತ್ತು ಪ್ಲಾಸ್ಟಿಕ್‌ (ಡೆಬಿಟ್‌) ಕಾರ್ಡ್‌ಗಳನ್ನು ಬಳಕೆಯಿಂದ ಕೈಬಿಡಲು ಎಸ್ ಬಿಐ ಈ ನಿರ್ಧಾರ ಕೈಗೊಂಡಿದೆ.

ಈ ಕುರಿತಂತೆ ದೆಹಲಿಯಲ್ಲಿ ನಡೆದ ಬ್ಯಾಂಕಿಂಗ್‌ ವಾರ್ಷಿಕ ಸಮ್ಮೇಳನದಲ್ಲಿ  ಮಾತನಾಡಿದ ಎಸ್ ಬಿಐ ಚೇರ್ಮನ್ ರಜನೀಶ್‌ ಕುಮಾರ್ ಅವರು, 'ಡೆಬಿಟ್‌ ಕಾರ್ಡ್‌ ಬಳಕೆ ನಿರ್ಮೂಲನೆ ಮಾಡುವುದು ನಮ್ಮ ಆಶಯವಾಗಿದೆ. ನಾವು ಅವುಗಳ ಬಳಕೆ   ಸ್ಥಗಿತಗೊಳಿಸುವ ಬಗ್ಗೆ ನನಗೆ ವಿಶ್ವಾಸ ಇದೆ. ಡೆಬಿಟ್‌ ಕಾರ್ಡ್‌ ರಹಿತ ಬ್ಯಾಂಕಿಂಗ್‌ ವ್ಯವಸ್ಥೆಗೆ, ಬ್ಯಾಂಕ್‌ ಈಗಾಗಲೇ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಸೇವೆ ಯೋನೊ (You Only Need One-Yono) ಆ್ಯಪ್‌ ನೆರವಾಗಲಿದೆ. ಈ ಆ್ಯಪ್‌ ನೆರವಿನಿಂದ ಎಟಿಎಂಗಳಿಂದ ನಗದು ಪಡೆಯಬಹುದು. ಅಂಗಡಿ ಮಳಿಗೆಗಳಲ್ಲಿ ಹಣ ಪಾವತಿಸಬಹುದು ಎಂದು  ಹೇಳಿದ್ದಾರೆ.

ಅಂತೆಯೇ 'ಎಸ್‌ಬಿಐ ಈಗಾಗಲೇ  'ಯೋನೊ' ಆ್ಯಪ್‌ ಮೂಲಕವೇ ನಗದು ಪಡೆಯುವ 68 ಸಾವಿರ 'ಯೋನೊ ಕ್ಯಾಷ್‌ಪಾಯಿಂಟ್ಸ್‌'ಗಳನ್ನು ಆರಂಭಿಸಿದೆ. ಒಂದೂವರೆ ವರ್ಷದಲ್ಲಿ ಇವುಗಳ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲ ಸರಕುಗಳನ್ನು ಖರೀದಿಸಲು ಸಾಲ ಮಾಡುವುದಕ್ಕೂ ‘ಯೋನೊ’ ನೆರವಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಗ್ರಾಹಕರು ತಮ್ಮ ಜೇಬಿನಲ್ಲಿ ಡೆಬಿಟ್‌ ಕಾರ್ಡ್‌ ಹೊಂದುವ ಅನಿವಾರ್ಯತೆ ಕಡಿಮೆಯಾಗಲಿದೆ. ಆ್ಯಪ್ ನಲ್ಲಿನ ಕ್ಯುಆರ್‌ ಕೋಡ್‌ ಸೇವೆ ಬಳಸಿ ಹಣ ಪಾವತಿಸುವುದೂ ಈಗ ತುಂಬ ಅಗ್ಗದ ವಿಧಾನವಾಗಿದೆ ಎಂದು ರಜನೀಶ್ ಕುಮಾರ್ ಹೇಳಿದರು.

SCROLL FOR NEXT