ವಾಣಿಜ್ಯ

ನಮ್ಮ ಗುರಿ ಮರೀಚೆಕೆಯಲ್ಲ, 5 ಟ್ರಿಲಿಯನ್ ಆರ್ಥಿಕತೆ ಸಾಧಿಸಬಹುದು: ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಯಾವುದೇ ಆತಂಕವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡು ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮ ವಲಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಈ ಹಿನ್ನೆಲೆಯಲ್ಲಿ ಎಲ್ಲ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಅಸೋಚಾಮ್‍ನ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಆರ್ಥಿಕತೆ ಸುಧಾರಣೆಗೆ ಸರ್ಕಾರ ಶ್ರಮದಿಂದ ಕೆಲಸ ಮಾಡಿದೆ. ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗುವುದು ಸದ್ಯದ ನಮ್ಮ ಗುರಿಯಾಗಿದೆ. ಸರ್ಕಾರ ಸವಾಲುಗಳಿಗೆ ಹೆದರುವುದಿಲ್ಲ. ಇವನ್ನು ನಿರ್ವಹಿಸಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದ್ದಾರೆ. 

ಈ ಗುರಿಯನ್ನು ಸಾಧಿಸಲು ಗಟ್ಟಿ ಅಡಿಪಾಯ ಹಾಕಲಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿಯವರು, ಕಳೆದ ಮೂರು ವರ್ಷಗಳಿಂದ ಉದ್ಯಮ ಸ್ನೇಹಿ ವಾತಾವರಣದ ಶ್ರೇಯಾಂಕದಲ್ಲಿ ಭಾತರ ಸುಸ್ಥಿರ ಸುಧಾರಣೆ ಸಾಧಿಸಿದೆ. ಶ್ರಮದಿಂದ ಕೆಲಸ ಮಾಡಿದರೆ ಶ್ರೇಯಾಂಕದಲ್ಲಿ ಮೇಲಕ್ಕೇರಬಹುದು. ಐದಾರು ವರ್ಷಗಳ ಹಿಂದೆ ನಮ್ಮ ಆರ್ಥಿಕತೆ ಸಂಕಷ್ಟದತ್ತ ಸಾಗಿತ್ತು. ನಮ್ಮ ಸರ್ಕಾರ, ಅನೇಕ ಕ್ರಮಗಳನ್ನು ತೆಗೆದುಕೊಂಡು ಆರ್ಥಿಕತೆಯನ್ನು ಸರಿದಾರಿಗೆ ತಂದಿದೆ. ಕೈಗಾರಿಕೋದ್ಯಮದ ದಶಕಗಳ ಬೇಡಿಕೆಯನ್ನು ಈಡೇರಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದರು. 

‘ಆರ್ಥಿಕತೆಯನ್ನು ವೇಗಗೊಳಿಸಲು ಮತ್ತು ಆಧುನೀಕರಣಗೊಳಿಸಲು ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯೂ ಸುಧಾರಿಸಿದ್ದು, ಬ್ಯಾಂಕಿಂಗ್‍ನಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅಂತ್ಯ ಹಾಡಲಾಗಿದೆ’ಎಂದು ಅವರು ಹೇಳಿದ್ದಾರೆ. 

ಭಾರತೀಯ ಅಸೋಸಿಯೇಟೆಡ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ(ಅಸೋಚಾಮ್)ಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಸ್ಮರಣಾರ್ಥ ಅಂಚೆ ಚೀಟಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

SCROLL FOR NEXT