ವಾಣಿಜ್ಯ

ಫೆಬ್ರವರಿ 1ರಂದು ಅರುಣ್ ಜೇಟ್ಲಿಯವರೇ ಬಜೆಟ್ ಮಂಡಿಸಲಿದ್ದಾರೆ; ಮೂಲಗಳು

Sumana Upadhyaya

ನವದೆಹಲಿ: ಅನಾರೋಗ್ಯದಿಂದ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಮಂಡಿಸುತ್ತಿರುವ ಮಧ್ಯಂತರ ಬಜೆಟ್ ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಲಭ್ಯರಾಗುವುದಿಲ್ಲ ಎಂಬ ವದಂತಿಗಳನ್ನು ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಎನ್ ಡಿಎ ಸರ್ಕಾರದ ಕೊನೆಯ ಬಜೆಟ್ ನ್ನು ಜೇಟ್ಲಿಯವರೇ ಫೆಬ್ರವರಿ 1ರಂದು ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಕಳೆದ ವರ್ಷ ನಡೆದ ಮೂತ್ರಪಿಂಡ ಕಸಿಯ ವೈದ್ಯಕೀಯ ತಪಾಸಣೆಗೆಂದು ಕಳೆದ ವಾರ ಅರುಣ್ ಜೇಟ್ಲಿಯವರು ಅಮೆರಿಕಾಕ್ಕೆ ಹೋಗಿದ್ದರು. ಅವರು ನಾಡಿದ್ದು ಫೆಬ್ರವರಿ ಬಜೆಟ್ ಮಂಡನೆಗೆ ವಾಪಸ್ಸಾಗಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಇದು ಮಧ್ಯಂತರ ಬಜೆಟ್ ಎಂದು ಹೇಳುತ್ತಿದ್ದರೂ ಕೂಡ ದೀರ್ಘಾವಧಿಯ ಸಂಪೂರ್ಣ ಬಜೆಟ್ ಭಾಷಣವನ್ನೇ ಸಚಿವ ಜೇಟ್ಲಿಯವರು ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ ನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು ಅಲ್ಲಿಂದ ಮೂರು ತಿಂಗಳವರೆಗೆ ಜೇಟ್ಲಿಯವರು ನಾಡಿದ್ದು ಮಂಡಿಸಲಿರುವ ಬಜೆಟ್ ಅನ್ವಯವಾಗುತ್ತದೆ. ನಂತರ ನೂತನ ಸರ್ಕಾರ ಮಂಡಿಸುವ ಬಜೆಟ್ ಪರಿಗಣನೆಗೆ ಬರುತ್ತದೆ.

ಮಧ್ಯಂತರ ಬಜೆಟ್ ನಲ್ಲಿ ಏನು ಮಂಡಿಸಬಹುದು, ಏನು ಮಂಡಿಸಬಾರದು ಎಂಬ ಸಂಪ್ರದಾಯಗಳಿರುತ್ತವೆ. ಸಂಪ್ರದಾಯಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ. ದೇಶದ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಬಜೆಟ್ ನಲ್ಲಿ ಏನೇನು ಇರಬೇಕೆಂದು ನಿರ್ಧರಿಸಬೇಕಾಗುತ್ತದೆ ಎಂದು ಕಳೆದ ಗುರುವಾರ ಅರುಣ್ ಜೇಟ್ಲಿಯವರು ವಿಡಿಯೊ ಕಾನ್ಫರೆನ್ಸ್ ನಲ್ಲಿ ಹೇಳಿದ್ದರು.

SCROLL FOR NEXT