'ಐಟಿ' ರಿಟರ್ನ್ಸ್ ಸಲ್ಲಿಕೆ: ನಕಲಿ ಬಾಡಿಗೆ ರಸೀದಿ ನೀಡಿದರೆ ಏನಾಗುತ್ತೆ ಅರಿತುಕೊಳ್ಳಿ ಜೋಕೆ!
ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ಪ್ರತಿಯೊಬ್ಬ ನೌಕರನಿಗೂ ಸಂಸ್ಥೆಯಿಂದ ನೀಡಲಾಗುವ ಬಾಡಿಗೆ ಮನೆ ಭತ್ಯೆ (ಹೆಚ್ ಆರ್ ಎ) ಅರ್ಹತೆ ಇದೆ.
ಹೆಚ್ ಆರ್ ಎ ಪಡೆಯುವುದರಿಂದ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿದ್ದು, ವೇತನ ಪಡೆಯುವ ಹಲವು ಮಂದಿ ಇದರ ಪ್ರಯೋಜನ ಪಡೆಯಲು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೂ ನಕಲಿ ದಾಖಲೆಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸುತ್ತಾರೆ. ಈ ವರೆಗೂ ನಕಲಿ ದಾಖಲೆಗಳನ್ನು ನೀಡಿ ಬಚಾವ್ ಆಗಬಹುದಿತ್ತು, ಆದರೆ 2019-20 ನೇ ಸಾಲಿನ ಐಟಿ ರಿಟರ್ನ್ಸ್ ನಲ್ಲಿ ನಕಲಿ ಬಾಡಿಗೆ ರಸೀದಿ ನೀಡಿ ಬಚಾವ್ ಆಗುವುದಕ್ಕೆ ಸಾಧ್ಯವಿಲ್ಲ ಜೋಕೆ.
ಒಂದು ವೇಳೆ ಬಂಡತನದಿಂದ ನಕಲಿ ಬಾಡಿಗೆ ರಸೀದಿ ನೀಡಿದ್ದೇ ಆದಲ್ಲಿ ಅದನ್ನು ಶಿಕ್ಷಾರ್ಹ ತೆರಿಗೆ ವಂಚನೆಯೆಂದು ಪರಿಗಣಿಸಲಾಗುತ್ತದೆ.
ಪರಿಷ್ಕೃತ ಕಾನೂನಿನ ಪ್ರಕಾರ ಓರ್ವ ವ್ಯಕ್ತಿ ವಾರ್ಷಿಕ 1 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರೆ, ಆತನ ಮನೆ ಮಾಲಿಕನ ಪ್ಯಾನ್ ನಂಬರ್, ಹಾಗೂ ಮನೆ ಬಾಡಿಗೆ ರಸೀದಿಯನ್ನು ಐಟಿ ರಿಟರ್ನ್ಸ್ ನಲ್ಲಿ ಲಗತ್ತಿಸಬೇಕಾಗುತ್ತದೆ.
ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಕಲಿ ಬಾಡಿಗೆ ರಸೀದಿಯನ್ನು ಐಟಿ ಇಲಾಖೆ ಪತ್ತೆ ಮಾಡಲಿದ್ದು, ಒಂದು ವೇಳೆ ಅನುಮಾನ ಬಂದಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಕಾನೂನು ನೊಟೀಸ್ ಜಾರಿಗೊಳಿಸಲಿದೆ. ಇಲಾಖೆ ಕೇಳುವ ದಾಖಲೆಗಳನ್ನು ಒದಗಿಸಲು ವಿಫಲವಾದರೆ ಶೇ.200 ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ಐಟಿ ಇಲಾಖೆ ಎಚ್ಚರಿಸಿದೆ.
ಪೋಷಕರು ಹಾಗೂ ಸಂಬಂಧಿಕರ ಮನೆಯಲ್ಲಿ ಬಾಡಿಗೆ ನೀಡಿ ವಾಸವಿರುವುದಕ್ಕೆ ಈ ವರೆಗೂ ಭಾರತೀಯ ಕಾನೂನಿನಲ್ಲಿ ಅವಕಾಶವಿದೆ ಆದರೆ ಐಟಿ ಇಲಾಖೆ ಕೇಳಿದಾಗ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಷ್ಟೆ.