ವಾಣಿಜ್ಯ

ಜೆಟ್ ಏರ್ವೇಸ್ ಬಿಕ್ಕಟ್ಟು: ತುರ್ತು ಸಭೆ ನಡೆಸುವಂತೆ ವಿಮಾನಯಾನ ಕಾರ್ಯದರ್ಶಿಗೆ ಸಚಿವರ ಸೂಚನೆ

Lingaraj Badiger
ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆ, ತನ್ನ ಪೈಲಟ್ ಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಅಲ್ಲದೆ ವೈಮಾನಿಕ ಹಾರಾಟದ ವೆಚ್ಚವನ್ನು ಭರಿಸಲಾಗದೆ ವಿಮಾನಗಳ ಹಾರಾಟವನ್ನೇ ರದ್ದುಗೊಳಿಸುತ್ತಿದ್ದು, ಈ ಕುರಿತು ತುರ್ತು ಸಭೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ವಿಮಾನಯಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಜೆಟ್ ಏರ್ವೇಸ್ ವಿಮಾನ ಹಾರಾಟ ರದ್ದುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿರುವ ಸುರೇಶ್ ಪ್ರಭು ಅವರು, ತುರ್ತು ಸಭೆ ನಡೆಸುವಂತೆ ವಿಮಾನಯಾನ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಮೂರು ತಿಂಗಳಿಂದ ವೇತನ ನೀಡ ಜೆಟ್ ಏರ್ವೇಸ್ ವಿರುದ್ಧ ಜೆಟ್​ ಏರ್​ವೇಸ್​​ ನಿರ್ವಹಣಾ ಇಂಜಿನಿಯರ್​ಗಳು ವಿಮಾನಯಾನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ವಿಮಾನದ ಸುರಕ್ಷತೆ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.
“ಕಳೆದ ಕೆಲ ತಿಂಗಳಿಂದ ನಮಗೆ ತೀವ್ರ ಹಣಕಾಸಿನ ಸಮಸ್ಯೆ ಎದುರದಾಗಿದೆ. ಇದರಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಮಾನಸಿಕವಾಗಿ ಒತ್ತಡ ಉಂಟು ಮಾಡುತ್ತಿದೆ. ಹಾಗಾಗಿ, ವಿಮಾನದ ಸುರಕ್ಷತೆಗೆ ಕುತ್ತು ಎದುರಾಗಿದೆ,” ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಮಧ್ಯೆ, ಜೆಟ್‌ ಏರ್‌ವೇಸ್‌ ಮತ್ತೆ 4 ವಿಮಾನಗಳ ಹಾರಾಟವನ್ನು ಸೋಮವಾರ ರದ್ದುಗೊಳಿಸಿದ್ದು, ಒಟ್ಟು 41 ವಿಮಾನಗಳ ಹಾರಾಟ ಈ ತನಕ ಸ್ಥಗಿತವಾದಂತೆ ಆಗಿದೆ. 
SCROLL FOR NEXT