ವಾಣಿಜ್ಯ

ಸತತ 5ನೇ ಬಾರಿ ರೆಪೋ ದರ ಇಳಿಕೆ, ಮತ್ತೆ 25 ಮೂಲಾಂಕ ಕಡಿತ ಮಾಡಿದ ಆರ್ ಬಿಐ

Lingaraj Badiger

ಮುಂಬೈ: ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸತತ ಐದನೇ ಬಾರಿ ರೆಪೋ ದರವನ್ನು ಇಳಿಕೆ ಮಾಡಿದ್ದು, ನಿರೀಕ್ಷೆಯಂತೇ ರೆಪೋ ದರದಲ್ಲಿ 25 ಮೂಲಾಂಕಗಳನ್ನು ಕಡಿತ ಮಾಡಿದೆ. ತಕ್ಷಣದಿಂದ ಜಾರಿಯಾಗುವಂತೆ 5.4 ರಷ್ಟಿದ್ದ ರೆಪೋ ದರ 5.15 ರಷ್ಟಿರಲಿದೆ. ರಿವರ್ಸ್ ರೆಪೋದರ ಕೂಡ 4.9 ಕ್ಕೆ ಇಳಿಕೆ ಮಾಡಲಾಗಿದೆ.
  
ಇಂದು ಮುಂಬೈನಲ್ಲಿ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿರುವ ಆರ್ ಬಿಐ, ಹಿಂದಿನ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದ ಶೇ 6.9 ರ 2019- 20 ಜಿಡಿಪಿ ಮುನ್ನೋಟವನ್ನು ಶೇ 6.1 ಕ್ಕೆ ಇಳಿಸಿದೆ. 2020- 21 ಕ್ಕೆ ಜಿಡಿಪಿ ಮುನ್ನೋಟವನ್ನು ಶೇ. 7.2 ಕ್ಕೆ ಅಂದಾಜಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆ ನಡೆಸಿ ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಗೊಳಿಸಿದೆ. 

ಪ್ರಮುಖ ಬಡ್ಡಿದರವನ್ನು ೨೫ ಮೂಲಾಂಶಗಳಷ್ಟು ಕಡಿತಗೊಳಿಸಿದೆ. ಬಡ್ಡಿ ದರ ಕಡಿತಗೊಳಿಸಲು ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಸಭೆಯ ನಂತರ ಆರ್ ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಗೃಹ ಮತ್ತು ವಾಹನ ಸಾಲದ ಬಡ್ಡಿ ತಗ್ಗಿಸಲು ರೆಪೋ ದರ ಇಳಿಕೆ ಸಹಕಾರಿಯಾಗಲಿದೆ. ದೇಶದೊಳಗಿನ ವಾಣಿಜ್ಯ ಬ್ಯಾಂಕ್ ಗಳಿಂದ ಆರ್ ಬಿಐ ಸಾಲ ಪಡೆಯುವ ಬಡ್ಡಿ ದರವೇ ರಿವರ್ಸ್ ರೆಪೋ ದರ.
  
ಕಳೆದ ಫೆಬ್ರವರಿಯಿಂದ ಆರ್ ಬಿ ಐ ಐದು ಬಾರಿ ರೆಪೋ ದರ ಇಳಿಕೆ ಮಾಡಿದ್ದು ಒಟ್ಟು, ಈ ದರ ಶೇ 1.35 ರಷ್ಟು ಇಳಿಕೆ ಕಂಡಿದೆ. ಕಳೆದ ಒಂಬತ್ತು ವರ್ಷಗಳಲ್ಲೇ ಅತಿ ಕಡಿಮೆ ರೆಪೋ ಇದಾಗಿದೆ. ಬ್ಯಾಂಕುಗಳಿಗೆ  ಒದಗಿಸುವ ಸಾಲಗಳಿಗೆ   ಆರ್‌ಬಿಐ   ವಿಧಿಸುವ ಬಡ್ಡಿದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ.

SCROLL FOR NEXT