ವಾಣಿಜ್ಯ

ಮನಮೋಹನ್ ಸಿಂಗ್-ರಘುರಾಮನ್ ರಾಜನ್ ಅವಧಿಯಲ್ಲಿ ಬ್ಯಾಂಕುಗಳು ದುಸ್ಥಿತಿಗೆ ತಲುಪಿದ್ದವು: ನಿರ್ಮಲಾ ಸೀತಾರಾಮನ್ 

Sumana Upadhyaya

ನ್ಯೂಯಾರ್ಕ್: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಆರ್ ಬಿಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರ ಅವಧಿಯಲ್ಲಿ ಭಾರತದ ಸಾರ್ವಜನಿಕ ವಲಯ ಬ್ಯಾಂಕುಗಳ ಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿತ್ತು ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಅವರು ನಿನ್ನೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಭಾರತದ ಆರ್ಥಿಕ ನೀತಿಗಳ ಬಗ್ಗೆ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಎಲ್ಲಾ ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯತೆಯ ಕೆಲಸವಾಗಿದೆ ಎಂದರು.


“ರಘುರಾಮ್ ರಾಜನ್ ಒಬ್ಬ ಆರ್ಥಿಕ ತಜ್ಞರಾಗಿ ಅವರ ಮೇಲೆ ನನಗೆ ಬಹಳ ಗೌರವವಿದೆ. ಭಾರತದ ಆರ್ಥಿಕತೆ ಅತ್ಯಂತ ಉತ್ತಮ ಸ್ಥಿತಿಯಲ್ಲಿರುವಾಗ ಅವರು ಆರ್ ಬಿಐ ಗವರ್ನರ್ ಆಗಿದ್ದರು. ರಾಜನ್​ ಆರ್​ಬಿಐ ಗವರ್ನರ್​ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ಹತ್ತಿರದ ವ್ಯಕ್ತಿಗಳಿಗೆ ಒಂದು ಫೋನ್​ ಕರೆ ಮಾಡಿದರೆ ಸಾಕು ಸಾಲ ಸಿಗುತ್ತಿತ್ತು. ಆದರೆ ಅದರಿಂದುಂಟಾದ ತೊಂದರೆಯಿಂದ ಹೊರಬರಲು ಸಾರ್ವಜನಿಕ ವಲಯ ಬ್ಯಾಂಕುಗಳು ಇಂದು ಸರ್ಕಾರದ ಷೇರುಗಳನ್ನು ಅವಲಂಬಿಸಬೇಕಾಗಿ ಬಂದಿದೆ'' ಎಂದರು.


ಆ ವೇಳೆ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಅವರು ಭಾರತದ ಬಗ್ಗೆ ಸ್ಥಿರವಾದ ಸ್ಪಷ್ಟ ದೃಷ್ಟಿಕೋನ ಹೊಂದಿದ್ದರು ಎಂದು ರಘುರಾಮನ್ ರಾಜನ್ ಅವರನ್ನು ಕೇಳಿದರೆ ಒಪ್ಪುತ್ತಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದಾಗ ನೆರೆದಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.


“ನಾನು ಯಾರ ಬಗ್ಗೆಯೂ ಟೀಕೆ ಮಾಡಲು, ತಮಾಷೆ ಮಾಡಲು ಈ ಮಾತನ್ನು ಹೇಳುತ್ತಿಲ್ಲ. ಮನಮೋಹನ್​ ಸಿಂಗ್​ ಹಾಗೂ ರಾಜನ್​ ಕಾಂಬಿನೇಷನ್​ನಲ್ಲಿ  ಬ್ಯಾಂಕ್​ಗಳು ಕಷ್ಟದ ದಿನಗಳನ್ನು ಎದುರಿಸಿದ್ದವು, ಆ ಸಮಯದಲ್ಲಿ ನಮಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ'' ಎಂದು ಆರೋಪಿಸಿದರು. 


ದೇಶದ ಆರ್ಥಿಕತೆ ಬಗ್ಗೆ ಮಾತನಾಡಿದ್ದ ರಘುರಾಮ್​ ರಾಜನ್​, “ಮೋದಿ ಸರ್ಕಾರ ಆರ್ಥಿಕತೆಯನ್ನು ನೆಲಕ್ಕೆ ತಳ್ಳುವ ಕೆಲಸ ಮಾಡುತ್ತಿದೆ. ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿದೆ'' ಎಂದು ಟೀಕಿಸಿದ್ದರು.

SCROLL FOR NEXT