ನವದೆಹಲಿ: ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ಗಡಿ ದಾಟುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ (ಆರ್ ಐಎಲ್) ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಇಷ್ಟೊಂದು ಮೌಲ್ಯ ತಲುಪಿದ ಮೊದಲ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಭಾಜನವಾಗಿದೆ.
ಮುಂಬೈ ಷೇರು ಮಾರುಕಟ್ಟೆಯ ವಾರಾಂತ್ಯದ ಇಂದಿನ ವಹಿವಾಟು ಆರಂಭವಾದಾಗಿನಿಂದ ಷೇರು ಏರಿಕೆಯಲ್ಲಿಯೇ ಇತ್ತು. ಮಾರುಕಟ್ಟೆ ಬಂಡವಾಳದ ಮೌಲ್ಯ ಈಗಾಗಲೇ 9 ಲಕ್ಷದ 1 ಸಾವಿರದ 490.09 ಕೋಟಿ ತಲುಪಿದೆ.
ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದೇಶೀಯ ಕಂಪೆನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ 8 ಲಕ್ಷ ಕೋಟಿ ಗಡಿ ದಾಟಿತ್ತು. ಷೇರು ಮಾರುಕಟ್ಟೆಯಲ್ಲಿ ಕಂಪೆನಿಯ ಷೇರುಗಳ ಕೊಡು-ಕೊಳ್ಳುವಿಕೆ ಆಧಾರದ ಮೇಲೆ ಬಂಡವಾಳ ಮೌಲ್ಯದ ಲೆಕ್ಕಾಚಾರ ನಡೆಯುತ್ತದೆ.