ವಾಣಿಜ್ಯ

ಕೊರೋನಾ ವಿರುದ್ಧ ಹೋರಾಟ: ಭಾರತಕ್ಕೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2.2 ಬಿಲಿಯನ್ ಡಾಲರ್ ನೆರವು

Raghavendra Adiga

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ 2.2 ಶತಕೋಟಿ ಡಾಲರ್ (ಸುಮಾರು 16,500 ಕೋಟಿ ರೂ.) ನೆರವು  ನೀಡುವುದಾಗಿ  ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸತ್ಸುಗು ಅಸಕವಾ ಭರವಸೆ ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಸಂವಹನ ನಡೆಸಿದ ಅಸಕವಾ ಈ ನೆರವಿನ ಕುರಿತು ಹೇಳಿದ್ದಾರೆ. 

ರಾಷ್ಟ್ರೀಯ ಆರೋಗ್ಯ ತುರ್ತು ಕಾರ್ಯಕ್ರಮ, ತೆರಿಗೆ ಮತ್ತು ವ್ಯವಹಾರಗಳಿಗೆ ಒದಗಿಸಲಾದ ಇತರ ಪರಿಹಾರ ಕ್ರಮಗಳು ಮತ್ತು ಮಾರ್ಚ್ 26 ರಂದು ಘೋಷಿಸಲಾದ 23 ಬಿಲಿಯನ್ ಯುಎಸ್ ಡಾಲರ್ (1.7 ಲಕ್ಷ ಕೋಟಿ ರೂ.) ಆರ್ಥಿಕ ಪರಿಹಾರ ಪ್ಯಾಕೇಜ್ ಸೇರಿದಂತೆ ಸಾಂಕ್ರಾಮಿಕ ರೋಗಕ್ಕೆ ಭಾರತ ಸರ್ಕಾರದ ನಿರ್ಣಾಯಕ ಪ್ರತಿಕ್ರಿಯೆಯನ್ನು ಅಸಕವಾ ಶ್ಲಾಘಿಸಿದ್ದಾರೆ.

"ಎಡಿಬಿ ಭಾರತದ ತುರ್ತು ಅಗತ್ಯಗಳನ್ನು  ಬೆಂಬಲಿಸಲು ಬದ್ಧವಾಗಿದೆ. ನಾವು ಈಗ ಆರೋಗ್ಯ ಕ್ಷೇತ್ರಕ್ಕೆ 2.2 ಬಿಲಿಯನ್ ಯುಎಸ್ ಡಾಲರ್  ನೆರವನ್ನು ತತ್ ಕ್ಷಣದ ಸಹಾಯಕ್ಕಾಗಿ ಒದಗಿಸುತ್ತೇವೆ. ಬಡವರ ಮೇಲೆ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ನಿವಾರಿಸಲು ಸಹಾಯ ಮಾಡುತ್ತೇವೆ; ಅಸಂಘಟಿತ ಕಾರ್ಮಿಕರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನೆರವು ನೀಡುತ್ತೇವೆ"

ಈ ಅವಧಿಯಲ್ಲಿ ಎಡಿಬಿ ತನ್ನ ಹಣಕಾಸು ಅಗತ್ಯಗಳನ್ನು ಪೂರೈಸಲು ಖಾಸಗಿ ವಲಯದೊಂದಿಗೆ ತೊಡಗಿಸಿಕೊಂಡಿದೆ ಎಂದು ಎಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ. "ಅಗತ್ಯವಿದ್ದರೆ ಭಾರತಕ್ಕೆ ಎಡಿಬಿ ನೆರವು ಮತ್ತಷ್ಟು ಹೆಚ್ಚಾಗಲಿದೆ. ತುರ್ತು ನೆರವು, ನೀತಿ ಆಧಾರಿತ ಸಾಲಗಳು ಮತ್ತು ಎಡಿಬಿ ನಿಧಿಗಳನ್ನು ಶೀಘ್ರವಾಗಿ ವಿತರಿಸಲು ಅನುಕೂಲವಾಗುವಂತೆ ಭಾರತದ ಅಗತ್ಯತೆಗಳನ್ನು ಪೂರೈಸಲು ನಮ್ಮೊಂದಿಗೆ ಲಭ್ಯವಿರುವ ಎಲ್ಲಾ ಹಣಕಾಸು ಆಯ್ಕೆಗಳನ್ನು ನಾವು ಪರಿಗಣಿಸುತ್ತೇವೆ" ಎಂದು ಅವರು ಹೇಳಿದರು.

SCROLL FOR NEXT