ವಾಣಿಜ್ಯ

ಗ್ರಾಹಕರಿಗೆ ಗುಡ್ ನ್ಯೂಸ್: ಏ.20ರಿಂದ ಮೊಬೈಲ್, ಟಿವಿ, ರೆಫ್ರಿಜರೇಟರ್ ಇ-ಮಾರುಕಟ್ಟೆಯಲ್ಲಿ ಲಭ್ಯ!

Nagaraja AB

ನವದೆಹಲಿ: ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಹೊರಬಂದಿದೆ. ಕೊರೋನಾವೈರಸ್ ಲಾಕ್ ಡೌನ್ ನಡುವೆ ಏಪ್ರಿಲ್ 20 ರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನಂತಹ ಇ- ಕಾಮರ್ಸ್ ವೇದಿಕೆಗಳಲ್ಲಿ ಮೊಬೈಲ್ ಪೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮತ್ತು ಸ್ಯಾನಿಟೈಸರಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ.

ಮೇ 3ರವರೆಗೂ ಲಾಕ್ ಡೌನ್ ವಿಸ್ತರಣೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾಳ್ ಹೊರಡಿಸಿದ ಬೆನ್ನಲ್ಲೇ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಮೊಬೈಲ್ ಪೋನ್ ಗಳು, ಟಿವಿಗಳು, ರೆಫ್ರಿಜಿರೇಟರ್ ಗಳು ಏಪ್ರಿಲ್ 20ರಿಂದ ಇ- ಕಾಮರ್ಸ್ ವೇದಿಕೆಗಳಲ್ಲಿ ದೊರೆಯಲಿವೆ ಎಂದು ಅವರು ತಿಳಿಸಿದ್ದಾರೆ. 

ಆದಾಗ್ಯೂ, ಇ- ಕಾಮರ್ಸ್ ಕಂಪನಿಗಳ ವಸ್ತುಗಳನ್ನು ಸಾಗಿಸುವ ವಾಹನಗಳು ರಸ್ತೆಯ ಮೇಲೆ ಓಡಾಡಲು ಸಂಬಂಧಿತ ಆಡಳಿತ ಸಂಸ್ಥೆಗಳಿಂದ ಅನುಮತಿಯನ್ನು ಪಡೆಯಬೇಕಾಗಿದೆ. 

ಬುಧವಾರದ ಮಾರ್ಗಸೂಚಿ ಪ್ರಕಾರ,ಲಾಕ್‌ಡೌನ್ ವಿಸ್ತರಣೆ ಸಮಯದಲ್ಲಿ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಇ-ಕಾಮರ್ಸ್ ಆಪರೇಟರುಗಳು ಬಳಸುವ ವಾಹನಗಳ ಓಡಾಟಕ್ಕೆ ಅನುಮತಿ ಅಗತ್ಯವೆಂದು ಸಚಿವಾಲಯ ಹೇಳಿದೆ.

ಗೃಹ ಸಚಿವಾಲಯ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಆಹಾರ, ಔಷಧಿ, ವೈದ್ಯಕೀಯ ಉಪಕರಣದಂತಹ ಅಗತ್ಯ ಸೇವೆಗಳನ್ನು ಮಾತ್ರ ಇ- ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡಬಹುದು ಎಂದು ನಿರ್ದಿಷ್ಟವಾಗಿ ಹೇಳಲಾಗಿತ್ತು. ಆದರೆ, ಬುಧವಾರ ಬಿಡುಗಡೆಯಾಗಿರುವ ಮಾರ್ಗಸೂಚಿಯಲ್ಲಿ ಅಗತ್ಯ, ಅಗತ್ಯಯೇತರ ವಸ್ತುಗಳು ಎಂದು ವಿಂಗಡಣೆ ಮಾಡಿಲ್ಲ.

SCROLL FOR NEXT