ವಾಣಿಜ್ಯ

ಜಿಯೋದ ಶೇ 1.16 ಷೇರನ್ನು 5,683 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಮತ್ತೊಂದು ಸಂಸ್ಥೆ

Srinivasamurthy VN

ನವದೆಹಲಿ: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಥೆಯಲ್ಲಿ ಮುಬದಲಾ ಬಳಿಕ ಇದೀಗ ಅಬುದಾಬಿ ಮೂಲದ ಮತ್ತೊಂದು ಸಂಸ್ಥೆ ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 5,683  ಕೋಟಿ ರೂಗಳಿಗೆ ಜಿಯೋದ ಶೇ.1.16ರಷ್ಟು ಷೇರುಗಳನ್ನು ಖರೀದಿ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಜಿಯೋ ಪ್ಲಾಟ್‌ ಫಾರ್ಮ್‌ಗಳಿಗಾಗಿ ಹೂಡಿಕೆ ಸಂಗ್ರಹಣೆ ಮುಂದುವರೆಸಿದ್ದು, ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಬಳಿಕ ಇದೀಗ ಅಬುಧಾಬಿ ಹೂಡಿಕೆ ಪ್ರಾಧಿಕಾರ (Abu Dhabi Investment Authority-ADIA) ಜಿಯೋದ ಶೇ 1.16 ರಷ್ಟು ಷೇರುಗಳನ್ನು5,683 ಕೋಟಿ ರೂ. ಗಳಿಗೆ ಖರೀದಿಸಿದೆ ಎಂದು  ಆರ್ ಐ ಎಲ್ ತಿಳಿಸಿದೆ.

ಇತ್ತೀಚೆಗಷ್ಟೇ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೋದ ಶೇ 1.85 ರಷ್ಟು ಪಾಲನ್ನು 9,093  ಕೋಟಿ ರೂ. ಗಳಿಗೆ  ಖರೀದಿಸಿತ್ತು. ಇದೀಗ ಅಬುಧಾಬಿ ಮೂಲದ ಮತ್ತೊಂದು ಸಂಸ್ಥೆ ADIA ಜಿಯೋ ಷೇರುಗಳನ್ನು ಖರೀದಿ ಮಾಡಿದೆ. ಗಮನಾರ್ಹ ಸಂಗತಿಯೆಂದರೇ ಕಳೆದ 6 ವಾರಗಳಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 7ನೇ ಸಂಸ್ಥೆ ಇದಾಗಿದೆ. ಈ ಹಿಂದೆ ಕಳೆದ ಏಪ್ರಿಲ್ 22ರಂದು ಫೇಸ್ ಬುಕ್ ಸಂಸ್ಥೆ ಶೇ. 9.99ರಷ್ಟು ಷೇರು ಖರೀದಿ (87,655.35 ಕೋಟಿ ರೂ) ಮಾಡಿ ಅಚ್ಚರಿ ಮೂಡಿಸಿತ್ತು. ಬಳಿಕ ಮೇ 3ರಂದು ಸಿಲ್ವರ್ ಲೇಕ್ ಸಂಸ್ಥೆ ಶೇ. 1.15ರಷ್ಟು ಷೇರು (5,655.75 ಕೋಟಿ ರೂ.) ಖರೀದಿ ಮಾಡಿತ್ತು. ಬಳಿಕ ಮೇ 8ರಂದು ವಿಸ್ತಾ ಸಂಸ್ಥೆ ಶೇ.2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು. ಇದಾದ ನಂತರ ಮೇ 17ರಂದು ಜನರಲೆ ಅಟ್ಲಾಂಟಿಕ್ ಸಂಸ್ಥೆ ಶೇ.1.34ರಷ್ಟು (6598.38  ಕೋಟಿ ರೂ) ಷೇರು ಖರೀದಿ ಮಾಡಿತ್ತು. ಮೇ 22ರಂದು ಕೆಕೆಆರ್ ಶೇ. 2.32ರಷ್ಟು (11,367 ಕೋಟಿ ರೂ) ಷೇರು ಖರೀದಿ ಮಾಡಿತ್ತು. ಇತ್ತೀಚೆಗೆ ಅಬುದಾಬಿ ಮೂಲದ ಮುಬದಲಾ ಶೇ.1.85ರಷ್ಟು ಪಾಲುದಾರಿಕೆ ಹೊಂದಿತ್ತು.

ಇದೀಗ ಅಬುಧಾಬಿ ಹೂಡಿಕೆ ಪ್ರಾಧಿಕಾರ (Abu Dhabi Investment Authority-ADIA) ಜಿಯೋದ ಶೇ 1.16 ರಷ್ಟು ಷೇರುಗಳನ್ನು5,683 ಕೋಟಿ ರೂ. ಗಳಿಗೆ ಖರೀದಿಸಿದೆ. ಆ ಮೂಲಕ ಮುಖೇಶ್ ಅಂಬಾನಿಯ ಒಡೆತನದ ಜಿಯೋ ಸಂಸ್ಥೆಯ ಮೇಲೆ ಸತತ ಜಾಗತಿಕ ಹೂಡಿಕೆಯ ಒಟ್ಟು ಮೌಲ್ಯ  97,885.65 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರೊಂದಿಗೆ ಜಿಯೋ ಈವರೆಗೆ ತನ್ನ ಶೇ. 21.06ರಷ್ಟು ಪಾಲನ್ನು ಮಾರಿದಂತಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT