ವಾಣಿಜ್ಯ

ಕೊರೋನಾ ವೈರಸ್: 21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತಕ್ಕೆ 9 ಲಕ್ಷ ಕೋಟಿ ರೂ ನಷ್ಟ: ತಜ್ಞರ ಅಂದಾಜು

Srinivasamurthy VN

ಮುಂಬೈ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಬ್ರೇಕ್ ಹಾಕಲು ಭಾರತ ಸರ್ಕಾರ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರಿಂದ ದೇಶಕ್ಕೆ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ವೈರಸ್ ಸೋಂಕು ಹಬ್ಬದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕರೆ ನೀಡಿರುವ 21`ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ ಸುಮಾರು 120 ಬಿಲಿಯನ್ (ಸುಮಾರು 9 ಲಕ್ಷ ಕೋಟಿ ರೂ) ಕಳೆದುಕೊಳ್ಳಲಿದೆ. ಅಂದರೆ ಅಂದಾಜು ಭಾರತದ ಶೇ.4 ರಷ್ಟು ಜಿಡಿಪಿ  ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಂತೆ ಬ್ರಿಟಿಷ್ ಬ್ರೋಕರೇಜ್ ಬಾರ್ಕ್ಲೇಸ್ ತನ್ನ ವರದಿ ನೀಡಿದ್ದು, ವರದಿಯಲ್ಲಿ ಭಾರತದಲ್ಲಿ ಘೋಷಣೆ ಮಾಡಿರುವ ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ 120 ಬಿಲಿಯನ್ ನಷ್ಟವಾಗಲಿದೆ. ದೇಶದ ಜಿಡಿಪಿ ಮೌಲ್ಯದ  ಶೇ.4 ರಷ್ಟು ಹಣ ನಷ್ಟ ಉಂಟಾಗಲಿದೆ. ಇದೇ ಕಾರಣಕ್ಕೆ ಈಗಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಘೋಷಿಸುವ ಅಗತ್ಯವಿದೆ ಎಂದು ಹೇಳಿದೆ.

ಇನ್ನು ಮುಂಬರುವ ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿರುವ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ದರ ಕಡಿತ ಮಾಡಲು ಸಜ್ಜಾಗಿದೆ. ಅಲ್ಲದೆ, ಹಣಕಾಸಿನ ಕೊರತೆಯ ಗುರಿಗಳನ್ನು ಸಹ ಮರು ಪರಿಶೀಲಿಸಲಾಗುವುದು. ಬಡ್ಡಿದರ  ಇಳಿಕೆಯಿಂದಾಗಿ ಇಎಂಐ ಹೊಂದಿರುವವರಿಗೆ ಅನುಕೂಲವಾಗಲಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ,

ದೇಶದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳವಾರ ರಾತ್ರಿ 12 ಗಂಟೆಯಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಮೂರು ವಾರಗಳ ಮಟ್ಟಿಗೆ ಲಾಕ್‌ ಡೌನ್ ಮಾಡಲು ಆದೇಶಿಸಿದರು. ಪರಿಣಾಮ ಬುಧವಾರ  ಷೇರು ಮಾರುಕಟ್ಟೆ ವ್ಯವಹಾರ ಆರಂಭಿಸುತ್ತಿದ್ದಂತೆ ಈಕ್ವಿಟಿ ಶೇ.0.47 ರಷ್ಟು ಕುಸಿತ ಅನುಭವಿಸಿದೆ. ಆದರೆ, ಈ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಬಹುದು ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರ ಮೌನವಹಿಸಿದೆ ಎನ್ನಲಾಗುತ್ತಿದೆ. 

SCROLL FOR NEXT