ವಾಣಿಜ್ಯ

ಕೊರೋನಾ ವೈರಸ್ ಲಾಕ್ ಡೌನ್: ಜೊಮ್ಯಾಟೋ ಬೆನ್ನಲ್ಲೇ 1,100 ಉದ್ಯೋಗಿಗಳಿಗೆ ಕತ್ತರಿ ಹಾಕಿದ ಸ್ವಿಗ್ಗಿ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಮುಂದುವರೆದಿರುವಂತೆಯೇ ಇತ್ತ ಭಾರತದಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಪ್ರಮಾಣಕ್ಕೆ ಕತ್ತರಿ ಹಾಕುತ್ತಿದ್ದು. ಖ್ಯಾತ ಆಹಾರ ಸರಬರಾಜು ಸಂಸ್ಥೆ ಸ್ವಿಗ್ಗಿ 1100 ಉದ್ಯೋಗಿಗಳನ್ನು ಕಡಿತಗೊಳಿಸಿದೆ.

ಹೌದು.. ಕೊರೋನ ವೈರಸ್ ಮಹಾಮಾರಿ ಅಬ್ಬರದಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿದ್ದು, ದೇಶದ ಬಹುತೇಕ ಎಲ್ಲ ವಲಯಗಳೂ ನಷ್ಟ ಅನುಭವಿಸುತ್ತಿವೆ. ದೇಶದ ಪ್ರಮುಖ ಆರ್ಥಿಕ ವಲಯವಾಗಿ ಗುರುತಿಸಿಕೊಂಡಿರುವ ಆಹಾರ ಪೂರೈಕೆ ವ್ಯವಹಾರಕ್ಕೂ ಕೊರೋನಾ ದುಷ್ಪರಿಣಾಮ  ತಗುಲಿದ್ದು, ಜೊಮ್ಯಾಟೋ ತನ್ನ ಉದ್ಯೋಗಿಗಳ ಕಡಿತ ಸುದ್ದಿ ಹೊರಹಾಕಿದ ಬೆನ್ನಲ್ಲೇ ಇದೀಗ ಸ್ವಿಗ್ಗಿ ಕೂಡ ತನ್ನ 1100 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದೆ.

ಈ ಬಗ್ಗೆ ಅಧಿಕೃತ ಇ-ಮೇಲೆ ರವಾನಿಸಿರುವ ಸ್ವಿಗ್ಗಿ ಆಡಳಿತ ಮಂಡಳಿ, 'ಇಂದು ಸ್ವಿಗ್ಗಿಗೆ ಅತ್ಯಂತ ಬೇಸರದ ದಿನ. ನಮ್ಮ ಸಂಸ್ಥೆಯ ಸುಮಾರು ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಸಹ ಸ್ಥಾಪಕ ಹಾಗೂ ಸಿಇಒ ಶ್ರೀಹರ್ಷ ತಿಳಿಸಿದ್ದಾರೆ.

ಕೊರೋನಾ ವೈರಸ್ ಕಾಣಿಸಿಕೊಂಡ ಬಳಿಕ ಕಂಪೆನಿಯು ಈಗಾಗಲೇ ತನ್ನ ಅಡುಗೆ ವ್ಯವಸ್ಥೆಗಳನ್ನು ತಾತ್ಕಾಲಿಕ ಅಥವಾ ಖಾಯಂ ಆಗಿ ಬಾಗಿಲು ಮುಚ್ಚಲು ನಿರ್ಧರಿಸಿದೆ. ದುರಾದೃಷ್ಟವಶಾತ್ ಮುಂದಿನ ಕೆಲವು ದಿಗಳಲ್ಲಿ ನಗರಗಳಲ್ಲಿ ಹಾಗೂ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ  ವಿವಿಧ ಶ್ರೇಣಿಯ ನಮ್ಮ ಕಂಪೆನಿಯ 1,100 ಉದ್ಯೋಗಿಗಳನ್ನು ಕೈಬಿಡುತ್ತಿದ್ದೇವೆ ಎಂದು ಶ್ರೀಹರ್ಷ ತಮ್ಮ ಕಂಪೆನಿಯ ಬ್ಲಾಗ್‌ನಲ್ಲಿ ಬರೆದು ಕೊಂಡಿದ್ದಾರೆ.

ರೆಸ್ಟೊರೆಂಟ್ ಅಗ್ರಿಗೇಟರ್ ಜೊಮೊಟೊ ತನ್ನ ಕಂಪೆನಿಯ ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ ಬೆನ್ನಲ್ಲೇ ಸ್ವಿಗ್ಗಿ ಕೂಡ ಅದೇ ಹಾದಿ ಹಿಡಿದಿದೆ. ಆ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ.
 

SCROLL FOR NEXT