ವಾಣಿಜ್ಯ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ: ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದ ಸಂಸದೀಯ ಸಮಿತಿ ಸದಸ್ಯರು

Srinivas Rao BV

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿ ಸದಸ್ಯರು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. 

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬ ಬಗ್ಗೆ ಸಂಸದೀಯ ಮಂಡಳಿ ಸದಸ್ಯರು ಅಧಿಕಾರಿಗಳನ್ನು ಕೇಳಿದ್ದಾರೆ. ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ಹಾಗೂ ಸರ್ಕಾರಿ ಸ್ವಾಮ್ಯದ ಐಒಸಿಎಲ್, ಬಿಪಿಸಿಎಲ್, ಹೆಚ್ ಪಿ ಸಿಎಲ್ ಹಾಗೂ ಜಿಎಐಎಲ್ ನ ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ವ್ಯವಹಾರಗಳ ಸಂಸದೀಯ ಸಮಿತಿ ಎದುರು ಹಾಜರಾಗಿದ್ದರು.

ಸಮಿತಿಯ ಹಲವು ಸದಸ್ಯರು ಪ್ರಮುಖವಾಗಿ ವಿಪಕ್ಷಗಳ ನಾಯಕರು, ಪದೇ ಪದೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದ್ದು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
 
ಸಚಿವಾಲಯದ ಅಧಿಕಾರಿಗಳು ಸಮಿತಿಗೆ ಈ ಕುರಿತು ಮಾಹಿತಿ ನೀಡಿದ್ದು, ಪೆಟ್ರೋಲಿಯಂ ಉತ್ಪನ್ನಗಳು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಿಗೆ ಜೋಡಣೆಯಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿ ಪ್ರಶ್ನೆಯನ್ನು ಕೇಳಿರುವ ವಿಪಕ್ಷ ಸದಸ್ಯರೊಬ್ಬರು ಅಧಿಕಾರಿಗಳ ವಾದಕ್ಕೆ ಎದುರೇಟು ನೀಡಿದ್ದು, ಅಂತಾರಾಷ್ಟ್ರೀಯ ಕಚ್ಚಾ ಬೆಲೆ ಕಡಿಮೆಯಾದಾಗಲೂ ದೇಶೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿಯೇ ಇತ್ತು ಎಂದು ಹೇಳಿರುವುದು ವರದಿಯಾಗಿದೆ.

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT