ವಾಣಿಜ್ಯ

ಮಲ್ಯ, ಚೋಕ್ಸಿ, ನೀರವ್ ಮೋದಿಯ 8,442 ಕೋಟಿ ರೂ. ಮೌಲ್ಯದ ಆಸ್ತಿ ಸಾರ್ವಜನಿಕ ಬ್ಯಾಂಕುಗಳಿಗೆ ವರ್ಗಾವಣೆ: ಜಾರಿ ನಿರ್ದೇಶನಾಲಯ 

Sumana Upadhyaya

ನವದೆಹಲಿ: ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರು ಮಾಡಿದ್ದ ವಂಚನೆಯಿಂದ ನಷ್ಟ ಅನುಭವಿಸಿದ್ದ ಸಾರ್ವಜನಿಕ ವಲಯ ಬ್ಯಾಂಕುಗಳಿಗೆ 8,441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವರ್ಗಾಯಿಸಿದೆ.

ಈ ಬಗ್ಗೆ ಇಂದು ಪ್ರಕಟಣೆ ಹೊರಡಿಸಿರುವ ಜಾರಿ ನಿರ್ದೇಶನಾಲಯ, ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ತಮ್ಮ ಕಂಪನಿಗಳ ಮೂಲಕ ಹಣವನ್ನು ಪಾವತಿಸದಿರುವುದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಂಚಿಸಿದ್ದಾರೆ, ಇದರಿಂದಾಗಿ ಒಟ್ಟು 22,586 ಕೋಟಿ ರೂಪಾಯಿಗಳಷ್ಟು ಬ್ಯಾಂಕುಗಳಿಗೆ ನಷ್ಟವಾಗಿದೆ ಎಂದಿದೆ.

ಮುಂಬೈನ ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಜಾರಿ ನಿರ್ದೇಶನಾಲಯ ಅದಕ್ಕೆ ಲಗತ್ತಿಸಲಾದ ಷೇರುಗಳನ್ನು (6,600 ಕೋಟಿ ರೂಪಾಯಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ವರ್ಗಾಯಿಸಿದೆ ಎಂದು ಮುಂಬೈಯ ವಿಶೇಷ ನ್ಯಾಯಾಲಯ ಹೇಳಿದೆ.

ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‌ನ ಷೇರುಗಳನ್ನು 5 ಸಾವಿರದ 824.50 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಷೇರುಗಳ ಮಾರಾಟದ ಮೂಲಕ 800 ಕೋಟಿ ರೂಪಾಯಿಗಳಷ್ಟು ಹೆಚ್ಚು ಮೊತ್ತವನ್ನು ಜೂನ್ 25 ರೊಳಗೆ ನಿರೀಕ್ಷಿಸಲಾಗಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಾವಿರದ 357 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿವೆ.

ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ಒಟ್ಟು 18 ಸಾವಿರದ 170.02 ಕೋಟಿ ರೂಪಾಯಿಗಳ ಲಗತ್ತಿಸಲಾದ ಅಥವಾ ವಶಪಡಿಸಿಕೊಂಡ ಸ್ವತ್ತುಗಳಲ್ಲಿ 330 ಕೋಟಿ ರೂಪಾಯಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬ್ಯಾಂಕಿಗೆ ಒಟ್ಟು ನಷ್ಟದ ಶೇಕಡಾ 40ರಷ್ಟು ಅಂದರೆ 9,042 ಕೋಟಿ ರೂಪಾಯಿಗಳ ಆಸ್ತಿಯನ್ನು ಸಾರ್ವಜನಿಕ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ.

ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದ್ದು ಅದನ್ನು ಇಂಗ್ಲೆಂಡಿನ ಹೈಕೋರ್ಟ್ ಅನುಮೋದಿಸಿದೆ. ವಿಜಯ್ ಮಲ್ಯ ಅವರಿಗೆ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದ್ದರಿಂದ, ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಅಂತಿಮವಾಗಿದೆ.

ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಮುಂಬೈನ ಪಿಎಂಎಲ್ಎ ನ್ಯಾಯಾಲಯವು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಈಗಾಗಲೇ ಘೋಷಿಸಿದೆ.

SCROLL FOR NEXT