ವಾಣಿಜ್ಯ

ದೇಸಿ ಅವತಾರದೊಂದಿಗೆ ಪಬ್ ಜಿ ಗೇಮ್ ಭಾರತಕ್ಕೆ ಮರು ಪ್ರವೇಶ 

Sumana Upadhyaya

ಬೆಂಗಳೂರು: ಮಕ್ಕಳ ಅಚ್ಚುಮೆಚ್ಚಿನ ಮೊಬೈಲ್ ಗೇಮ್ ಪಬ್ ಜಿ ಭಾರತದಲ್ಲಿ ಬ್ಯಾಟ್ಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್, ಕಂಪೆನಿ ಅಭಿವೃದ್ಧಿಪಡಿಸಿರುವ ಪಬ್ ಜಿ ಭಾರತದಲ್ಲಿ ಮರು ಆರಂಭವಾಗುತ್ತಿದೆ ಎಂದು ಗುರುವಾರ ತಿಳಿಸಿದೆ.

ಕೋವಿಡ್-19 ಮತ್ತು ಚೀನಾ-ಭಾರತ ಗಡಿ ಸಂಘರ್ಷ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತ ಸರ್ಕಾರ ಪಬ್ ಜಿ ಸೇರಿದಂತೆ 100ಕ್ಕೂ ಹೆಚ್ಚು ಚೀನಾದ ಆಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು.

ಮರು ಆರಂಭಗೊಳ್ಳುವ ಮೊಬೈಲ್ ಗೇಮ್ ಎಎಎ ಬಹುಪದರ ಅನುಭವವನ್ನು ಮೊಬೈಲ್ ನಲ್ಲಿ ನೀಡಲಿದೆ. ಈ ಬಾರಿ ಹಲವು ಸುಧಾರಿತ ತಂತ್ರಜ್ಞಾನಗಳು, ವಿಶೇಷ ಇನ್ ಗೇಮ್ ಈವೆಂಟ್ ಗಳು, ಲಕ್ಷಣಗಳು ಮೊಬೈಲ್ ನಲ್ಲಿ ಹೊಂದಿರುತ್ತದೆ.

ಡಾಟಾಗಳ ಗೌಪ್ಯತೆ, ಸಂಗ್ರಹಗಳ ಬಗ್ಗೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪ್ರತಿ ಹಂತದಲ್ಲಿ ದಾಖಲೆಗಳ ರಕ್ಷಣೆ, ಭದ್ರತೆಗೆ ಸಹಭಾಗಿ ಕಂಪೆನಿ ಜೊತೆ ಕೆಲಸ ಮಾಡುತ್ತಿರುವುದಾಗಿ ಕ್ರಾಫ್ಟನ್ ಕಂಪೆನಿ ಹೇಳಿದೆ.

ಗೌಪ್ಯತೆ ಹಕ್ಕುಗಳನ್ನು ಗೌರವಿಸಲಾಗಿದೆಯೆಂದು ಇದು ಖಚಿತಪಡಿಸುತ್ತದೆ ಮತ್ತು ಎಲ್ಲಾ ಅಂಕಿಅಂಶ ಸಂಗ್ರಹಣೆ ಮತ್ತು ಸಂಗ್ರಹಣೆಯು ಭಾರತದಲ್ಲಿ ಮತ್ತು ಇಲ್ಲಿ ಪಬ್ ಜಿ ಆಡುವವರಿಗೆ ಅನ್ವಯವಾಗುವ ಎಲ್ಲಾ ಕಾನೂನು ಮತ್ತು ನಿಬಂಧನೆಗಳೊಂದಿಗೆ ಸಂಪೂರ್ಣ ಅನುಸರಿಸುತ್ತದೆ ಎಂದು ಕಂಪೆನಿ ಹೇಳಿದೆ.

ಚೀನಾದ ದೈತ್ಯ ಕಂಪೆನಿ ಟೆನ್ಸೆಂಟ್ ಜೊತೆಗೆ ಸಂಬಂಧ ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ಪಬ್ ಜಿಯನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸರ್ಕಾರ ನಿಷೇಧಿಸಿತ್ತು. ಸದ್ಯದಲ್ಲಿ ಭಾರತದಲ್ಲಿ ಪಬ್ ಜಿಯನ್ನು ಇಲ್ಲಿಗೆ ತಕ್ಕಂತೆ ವಿನ್ಯಾಸ ಮಾಡಲಾಗುತ್ತಿದ್ದು ಪಬ್ ಜಿ ಆಡುವವರಿಗೆ ಸ್ಥಳೀಯ ಆರೋಗ್ಯಕರ ರೀತಿಯ ವಾತಾವರಣ ನಿರ್ಮಿಸಿಕೊಡಲಾಗುವುದು ಎಂದು ಹೇಳಿದೆ.

ಭಾರತದ ತ್ರಿವರ್ಣ ಧ್ವಜದ ಬಣ್ಣದಲ್ಲಿ ಬ್ಯಾಟ್ಲ್ ಗ್ರೌಂಡ್ ಮೊಬೈಲ್ ಇಂಡಿಯಾ, ಎ ಬ್ಯಾಟಲ್ ರಾಯಲ್ ಎಕ್ಸ್ ಪಿರಿಯನ್ಸ್ ಎಂದು ಬರೆಯಲಾಗಿದ್ದು ಆರಂಭಕ್ಕೆ ಮುನ್ನ ಮೊದಲೇ ದಾಖಲಾತಿ ಅವಧಿ ಹೊಂದಿದೆ. ಭಾರತದಲ್ಲಿ ಮಾತ್ರ ಆಡಲು ಲಭ್ಯವಾಗುತ್ತದೆ.

ಪಬ್ ಜಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳ ದಾಖಲೆ ಪ್ರಕಾರ, ಚೀನಾ ಹೊರತುಪಡಿಸಿ ಸಾಗರೋತ್ತರದಲ್ಲಿ 644 ಮಿಲಿಯನ್ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದು ಶೇಕಡಾ 28.8 ಮಂದಿ ಗ್ರಾಹಕರನ್ನು ಹೊಂದಿತ್ತು.

SCROLL FOR NEXT