ವಾಣಿಜ್ಯ

ಏರ್ ಇಂಡಿಯಾ ಮಾರಾಟಕ್ಕೆ ಹಣಕಾಸು ಬಿಡ್‌ ಸ್ವೀಕರಿಸಿದ ಕೇಂದ್ರ, ಟಾಟಾ ಸೇರಿ ಇತರರು ಭಾಗಿ

Lingaraj Badiger

ನವದೆಹಲಿ: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖರೀದಿಸಲು ಹಲವು ಹಣಕಾಸು ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸರ್ಕಾರ ಬುಧವಾರ ಹೇಳಿದೆ.

ಏತನ್ಮಧ್ಯೆ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿಗೆ ಬಿಡ್ ಸಲ್ಲಿಸಿರುವುದಾಗಿ ಟಾಟಾ ಸನ್ಸ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

"ಏರ್ ಇಂಡಿಯಾ ಖರೀದಿಗಾಗಿ ವಹಿವಾಟು ಸಲಹೆಗಾರರು ಬಿಡ್‌ಗಳನ್ನು ಸ್ವೀಕರಿಸಿದ್ದಾರೆ. ಪ್ರಕ್ರಿಯೆಯು ಈಗ ಮುಕ್ತಾಯದ ಹಂತಕ್ಕೆ ಸಾಗಿದೆ" ಎಂದು ಬಂಡವಾಳ ಹಿಂತೆಗೆದ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗದ(ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರು ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಶೇಕಡಾ 100 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಪೂರಕ ಸೇವೆ ಒದಗಿಸುವ ಕಂಪನಿಯಾದ ಏರ್ ಇಂಡಿಯಾ ಸ್ಯಾಟ್ಸ್ ಏರ್​ಪೋರ್ಟ್​ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನಿಂದಲೂ ಶೇ. 50 ರಷ್ಟು ಬಂಡವಾಳ ಹಿಂಪಡೆಯಲು ಸರ್ಕಾರ ಉದ್ದೇಶಿಸಿದೆ.

ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಟಾಟಾ ಗ್ರೂಪ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಏರ್​ ಇಂಡಿಯಾ ಖರೀದಿಗೆ ಬಿಡ್​ ಸಲ್ಲಿಸಿವೆ.

ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಪ್ರಸ್ತುತ ಏರ್​ ಇಂಡಿಯಾ ಕಂಪನಿಯು 43,000 ಕೋಟಿ ರೂ. ಸಾಲದ ಸುಳಿಯಲ್ಲಿದೆ.

SCROLL FOR NEXT