ವಾಣಿಜ್ಯ

ಮೂಲಸೌಕರ್ಯಕ್ಕೆ 36,300 ಕೋಟಿ ರೂ. ಹೂಡಿಕೆ; ಭಾರತದಲ್ಲಿ 48 ಸಾವಿರ ಉದ್ಯೋಗ ಸೃಷ್ಟಿಸಲು ಅಮೇಜಾನ್ ವೆಬ್ ಸರ್ವೀಸಸ್ ಯೋಜನೆ! 

Srinivas Rao BV

ನವದೆಹಲಿ: ಅಮೇಜಾನ್ ವೆಬ್ ಸೇವೆ (ಎಡಬ್ಲ್ಯುಎಸ್) ಭಾರತದಲ್ಲಿ 2030 ರ ವೇಳೆಗೆ 36,300 ಕೋಟಿ ರೂಪಾಯಿ ಮೂಲಸೌಕರ್ಯ ಹೂಡಿಕೆ ಮಾಡಲಿದ್ದು 48,000 ಪೂರ್ಣಾವಧಿ ಉದ್ಯೋಗವನ್ನು ವಾರ್ಷಿಕವಾಗಿ ಸೃಷ್ಟಿಯಾಗಲಿದೆ.
 
ಹೈದರಾಬಾದ್ ನಲ್ಲಿ ಸಂಸ್ಥೆ ಹೂಡಿಕೆ ಮಾಡುತ್ತಿದ್ದು, ಇದು ಎರಡನೇ ಎಡಬ್ಲ್ಯುಎಸ್ ಮೂಲಸೌಕರ್ಯ ಪ್ರದೇಶವಾಗಲಿದೆ.

ಎಡಬ್ಲ್ಯುಎಸ್ ಏಷ್ಯಾ ಪೆಸಿಫಿಕ್ (ಹೈದರಾಬಾದ್) ಪ್ರದೇಶ ಭಾರತದ ಡಿಜಿಟಲ್ ರೂಪಾಂತರಕ್ಕೆ ಸಹಕಾರಿಯಾಗಲಿದ್ದು, ದೇಶದಲ್ಲಿ ದೀರ್ಘಾವಧಿಯ ಹೂಡಿಕೆ ಇದಾಗಲಿದೆ ಎಂದು ಅಮೇಜಾನ್ ಡೇಟಾ ಸೇವೆಗಳ ಮೂಲಸೌಕರ್ಯ ಸೇವೆಗಳ ವಿಭಾಗದ ಉಪಾಧ್ಯಕ್ಷ ಪ್ರಸಾದ್ ಕಲ್ಯಾಣರಾಮನ್ ಹೇಳಿದ್ದಾರೆ.

ಡೇಟಾ ಸೆಂಟರ್ ಗಳು ಡಿಜಿಟಲ್ ವ್ಯವಸ್ಥೆಯ ಬಹುಮುಖ್ಯ ಅಂಶವಾಗಿದ್ದು, ಎಡಬ್ಲ್ಯುಎಸ್ ನಿಂದ ಹೂಡಿಕೆ ಬರುತ್ತಿರುವುದು ಭಾರತದಲ್ಲಿ ಅದರ ಡೇಟಾ ಸೆಂಟರ್ ವಿಸ್ತಾರಗೊಳ್ಳುತ್ತಿರುವುದು ಭಾರತದ ಡಿಜಿಟಲ್ ಆರ್ಥಿಕತೆಗೆ ವೇಗ ನೀಡುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಪ್ರದೇಶದ ಉದ್ಘಾಟನೆಯ ಮೂಲಕ ಎಡಬ್ಲ್ಯುಎಸ್ ಈಗ 30 ಭೌಗೋಳಿಕ ಪ್ರದೇಶಗಳಲ್ಲಿ 96 ಕ್ಕೂ ಹೆಚ್ಚು ಲಭ್ಯತೆಯ ಝೋನ್ ಗಳನ್ನು ಹೊಂದಿದೆ. ಇನ್ನೂ ಐದು ಝೋನ್ ಗಳು ಆಸ್ಟ್ರೇಲಿಯಾ, ಕೆನಡಾ, ಇಸ್ರೇಲ್, ನ್ಯೂಜಿಲ್ಯಾಂಡ್, ಥಾಯ್ಲ್ಯಾಂಡ್ ಗಳಲ್ಲಿ ತಲೆ ಎತ್ತಲಿವೆ ಎಂದು ಸಂಸ್ಥೆ ತಿಳಿಸಿದೆ. 

ಹೈದರಾಬಾದ್ ಪ್ರದೇಶದಲ್ಲಿನ ಚಟುವಟಿಕೆಗಳು ಕಾರ್ಯನಿರ್ವಹಿಸುವುದರೊಂದಿಗೆ ಭಾರತದ ಜಿಡಿಪಿಗೆ 2030 ರ ವೇಳೆಗೆ 7.6 ಬಿಲಿಯನ್ ಡಲರ್ (63,600) ಕೋಟಿ ರೂಪಾಯಿ ಸೇರಲಿದೆ ಎದು ಸಂಸ್ಥೆ ತಿಳಿಸಿದೆ.

SCROLL FOR NEXT