ವಿಪ್ರೋ ತ್ರೈಮಾಸಿಕ ವರದಿ
ವಿಪ್ರೋ ತ್ರೈಮಾಸಿಕ ವರದಿ 
ವಾಣಿಜ್ಯ

Wipro Q4 Reports: ವಿಪ್ರೋ ನಿವ್ವಳ ಲಾಭ ಶೇ. 8ರಷ್ಟು ಕುಸಿತ, 2,835 ಕೋಟಿ ರೂ. ಗೆ ಇಳಿಕೆ!

Srinivasamurthy VN

ನವದೆಹಲಿ: ಭಾರತದ ಐಟಿ ದೈತ್ಯ ಸಂಸ್ಥೆ ವಿಪ್ರೋ (Wipro) ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ವಿಪ್ರೋ (Wipro)ದ ಮಾರ್ಚ್ 2024 ತ್ರೈಮಾಸಿಕದ (ನಾಲ್ಕನೇ ತ್ರೈ ಮಾಸಿಕ) ವರದಿ ಬಿಡುಗಡೆಯಾಗಿದ್ದು, 2024ರ ಜನವರಿ-ಮಾರ್ಚ್ ಅವಧಿಯಲ್ಲಿ ವಿಪ್ರೋದ ಆದಾಯ 22,208.3 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು ಎಂದು ಹೇಳಲಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ವಿಪ್ರೋ ಸಂಸ್ಥೆ 3,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ವಿಪ್ರೋ ನಿರ್ದೇಶಕರ ಮಂಡಳಿಯು ಮಧ್ಯಂತರ ಲಾಭಾಂಶ (ಡಿವಿಡೆಂಡ್‌)ವನ್ನು ಘೋಷಿಸಿದ್ದು, ಇದನ್ನು 2023-24ರ ಹಣಕಾಸು ವರ್ಷದ ಅಂತಿಮ ಲಾಭಾಂಶವೆಂದು ಪರಿಗಣಿಸಲಾಗುವುದು ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ, ವಿಪ್ರೋದ ಐಟಿ ಸೇವೆಗಳ ಆದಾಯವು 2,657.4 ಮಿಲಿಯನ್ ಡಾಲರ್ ಆಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ವಿಪ್ರೋ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ ಮಾತನಾಡಿ, “2024ರ ಹಣಕಾಸು ವರ್ಷವು ನಮ್ಮ ಉದ್ಯಮಕ್ಕೆ ಸವಾಲಿನ ವರ್ಷವೆಂದು ಸಾಬೀತಾಗಿದೆ. ಅದಾಗ್ಯೂ ಮುಂದೆ ಇರುವ ಅವಕಾಶಗಳ ಬಗ್ಗೆ ನಾವು ಭರವಸೆ ಹೊಂದಿದ್ದೇನೆವೆ. ನಾವು ಪ್ರಮುಖ ತಾಂತ್ರಿಕ ಬದಲಾವಣೆಯ ಅಂಚಿನಲ್ಲಿದ್ದೇವೆ. ಕೃತಕ ಬುದ್ಧಿಮತ್ತೆ, ನಮ್ಮ ಗ್ರಾಹಕರ ಅಗತ್ಯಗಳಿಗೆ ಒತ್ತು ನೀಡಲಿದ್ದೇವೆʼʼ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ವಿಪ್ರೋದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶ್ರೀನಿವಾಸ್ (ಶ್ರೀನಿ) ಪಲ್ಲಿಯಾ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಶ್ರೀನಿವಾಸ್ ಮೂರು ದಶಕಗಳಿಂದ ವಿಪ್ರೋದಲ್ಲಿದ್ದಾರೆ ಮತ್ತು ಇತ್ತೀಚೆಗೆ ವಿಪ್ರೋದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕಾರ್ಯತಂತ್ರದ ಮಾರುಕಟ್ಟೆಯಾದ ಅಮೇರಿಕಾಸ್ 1ರ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಜತೆಗೆ ವಿಪ್ರೋ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.

ವಿಪ್ರೋ ಕಳೆದ ತಿಂಗಳು ಆರು ಉದ್ಯೋಗಿಗಳನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು ಮತ್ತು ಇತರ 25 ಉದ್ಯೋಗಿಗಳಿಗೆ ಉಪಾಧ್ಯಕ್ಷ ಸ್ಥಾನ ನೀಡಿ ಭಡ್ತಿ ಒದಗಿಸಿತ್ತು. ಹಣಕಾಸು ಮುಖ್ಯಸ್ಥ ಜತಿನ್ ದಲಾಲ್, ಚೀಫ್‌ ಗ್ರೋತ್‌ ಆಫೀಸರ್‌ ಸ್ಟೆಫನಿ ಟ್ರೌಟ್ಮನ್ ಮತ್ತು ಡಿಜಿಟಲ್ ಮತ್ತು ಕ್ಲೌಡ್ ಮುಖ್ಯಸ್ಥ ಭರತ್ ನಾರಾಯಣನ್ ಸೇರಿದಂತೆ ಅನೇಕ ಹಿರಿಯ ಕಾರ್ಯನಿರ್ವಾಹಕರು ಕಳೆದ ವರ್ಷದಲ್ಲಿ ವಿಪ್ರೋವನ್ನು ತೊರೆದಿದ್ದರು.

SCROLL FOR NEXT