ಭಾರತದ ಮಸಾಲೆ ಪದಾರ್ಥಗಳು
ಭಾರತದ ಮಸಾಲೆ ಪದಾರ್ಥಗಳು 
ವಾಣಿಜ್ಯ

MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ ಕಾರಕ ಕೆಮಿಕಲ್‌ ಪತ್ತೆ, ನಿರ್ಬಂಧ, ಭಾರತದಲ್ಲೂ ತನಿಖೆ!

Srinivasamurthy VN

ನವದೆಹಲಿ: ಭಾರತ ಮೂಲದ MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ ಕಾರಕ ಕೆಮಿಕಲ್‌ ಪತ್ತೆಯಾಗಿದೆ ಎಂದು ಆರೋಪಿಸಿ ಯೂರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ನಿರ್ಬಂಧ ಹೇರಿದ್ದು, ಭಾರತದಲ್ಲೂ ತನಿಖೆ ನಡೆಸುವ ಸಾಧ್ಯತೆ ಇದೆ.

ಹೌದು.. ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ (Ethylene oxide) ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಭಾರತೀಯ ಆಹಾರ ಪದಾರ್ಥಗಳನ್ನು ವಿಚಕ್ಷಣೆಯಲ್ಲಿಡಲಾಗಿದೆ. ಈಗಾಗಲೇ MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಈ ಎಥಿಲಿನ್‌ ಆಕ್ಸೈಡ್‌ (Ethylene oxide) ಪತ್ತೆಯಾಗಿದ್ದು, 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಅಲ್ಲದೆ ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಮಂಡಳಿಯ ಅಧಿಕಾರಿಗಳು, ರಫ್ತುದಾರರಿಗೆ ಸಂಬಂಧಿಸಿದ ತಾಂತ್ರಿಕ ದತ್ತಾಂಶ, ವಿಶ್ಲೇಷಣಾತ್ಮಕ ವರದಿಗಳು ಮತ್ತು ಮಾಹಿತಿಯನ್ನು ಪಡೆಯಲಾಗುತ್ತಿದೆ. ಎರಡು ಬ್ರಾಂಡ್‌ಗಳು ತಯಾರಿಸಿದ ಕೆಲವು ಮಸಾಲೆ ಮಿಶ್ರಣಗಳಲ್ಲಿ ಕೀಟನಾಶಕ ಎಥಿಲೀನ್ ಆಕ್ಸೈಡ್ ಅನುಮತಿಸುವ ಮಟ್ಟಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿದ ನಂತರ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಎಥಿಲೀನ್ ಆಕ್ಸೈಡ್ ಗೆ ಭಾರತದಲ್ಲೂ ನಿಷೇಧ

ಇನ್ನು ಕ್ಯಾನ್ಸರ್ ಕಾರಕ ಎಥಿಲೀನ್ ಆಕ್ಸೈಡ್ ಅನ್ನು ಆಹಾರಕ್ಕೆ ಸೇರಿಸುವುದನ್ನು ಭಾರತದಲ್ಲೂ ನಿಷೇಧಿಸಲಾಗಿದೆ, ಇದು C2H4O ಸೂತ್ರದೊಂದಿಗಿನ ರಾಸಾಯನಿಕ ಸಂಯುಕ್ತವಾಗಿದೆ. ಇದು ಸುಡುವ, ಬಣ್ಣರಹಿತ ಅನಿಲವಾಗಿದ್ದು, ಕೋಣೆಯ ಉಷ್ಣಾಂಶದಲ್ಲಿ ಸಿಹಿ ವಾಸನೆಯನ್ನು ಹೊಂದಿರುತ್ತದೆ ಮತ್ತು ಡಿಎನ್‌ಎಗೆ ಹಾನಿ ಮಾಡುವ ಸಾಮರ್ಥ್ಯದಿಂದಾಗಿ ಇದು ಪರಿಣಾಮಕಾರಿ ಕ್ರಿಮಿನಾಶಕ ಏಜೆಂಟ್ ಆಗಿದೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲೂ ತನಿಖೆ

ಇನ್ನು ಯೂರೋಪ್, ಸಿಂಗಾಪುರ, ಹಾಂಕಾಂಗ್ ನಲ್ಲಿ ಭಾರತೀಯ ಆಹಾರ ಪದಾರ್ಥಗಳನ್ನು ನಿಷೇಧಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರ ದೇಶದಲ್ಲೂ ಈ ಆಹಾರ ಪದಾರ್ಥಗಳ ಕುರಿತು ತನಿಖೆಗೆ ಮುಂದಾಗಿದೆ. ಅಲ್ಲದೆ ಈ ಕುರಿತು ಅರಿವು ಮೂಡಿಸಲು ಮತ್ತು ಭವಿಷ್ಯದಲ್ಲಿ ಭಾರತೀಯ ಉತ್ಪನ್ನಗಳನ್ನು ನಿಷೇಧಿಸದಂತೆ ತಡೆಯಲು ರಫ್ತುದಾರರಿಗೆ ಸಲಹೆಯನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT