ಮುಂಬೈ: ಭಾರತೀಯ ಷೇರುಮಾರುಕಟ್ಟೆ ಗುರುವಾರ ಭಾರಿ ಕುಸಿತ ಕಂಡಿದ್ದು, ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತ ಪರಿಣಾಮ ನೇರವಾಗಿ ಭಾರತೀಯ ಹೂಡಿಕೆದಾರರ ಮೇಲೆ ಬೀರಿದೆ.
ಹೌದು.. ಗುರುವಾರ ಭಾರತೀಯ ಷೇರುಮಾರುಕಟ್ಟೆ ಮಹಾ ಕುಸಿತದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.1.20ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.1.02ರಷ್ಟು ಮಹಾ ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 964.16 ಅಂಕಗಳ ಇಳಿಕೆಯೊಂದಿಗೆ 79,218.05 ಅಂಕಗಳಿಗೆ ಕುಸಿದಿದ್ದು, ನಿಫ್ಟಿ 247.15 ಅಂಕಗಳ ಇಳಿಕೆಯೊಂದಿಗೆ 23,951.70 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 1,162.12 ಅಂಕಗಳಷ್ಟು ಕುಸಿತ ಕಂಡಿತ್ತು. ಆದರೆ ದಿನದ ವಹಿವಾಟು ಅಂತ್ಯದ ವೇಳೆಗೆ ಕುಸಿತದ ಪ್ರಮಾಣ 964.16 ಅಂಕಗಳಿಗೆ ಇಳಿಕೆಯಾಯಿತು. ನಿಫ್ಟಿ ಕೂಡ ಇಂದು ಗರಿಷ್ಠ 328.55 ಅಂಕಗಳಷ್ಟು ಕುಸಿತವಾಗಿತ್ತಾದರೂ ದಿನದ ವಹಿವಾಟು ಅಂತ್ಯದ ವೇಳೆಗೆ 247.15 ಅಂಕಗಳಿಗೆ ಇಳಿಕೆಯಾಯಿತು.
ದರ ಕಡಿತ ಮಾಡಿದ ಅಮೆರಿಕ
ಇನ್ನು ಇಂದಿನ ಷೇರು ಸೂಚ್ಯಂಕ ಕುಸಿತಕ್ಕೆ ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತ ನಿರ್ಧಾರ ಕಾರಣ ಎಂದು ಹೇಳಲಾಗಿದ್ದು, ದರ ಕಡಿತ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಭಾರತೀಯ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಂದಾದರು. ಇದು ಇಂದು ಮಾರುಕಟ್ಟೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಭಾರತ ಮಾತ್ರವಲ್ಲದೇ ಏಷ್ಯಾದ ಇತರೆ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳೂ ಕೂಡ ಭಾರಿ ಪ್ರಮಾಣದ ಕುಸಿತ ದಾಖಲಿಸಿದೆ.
ಹೂಡಿಕೆದಾರರ 4 ಲಕ್ಷ ಕೋಟಿ ರೂ ನಷ್ಟ!
ಇನ್ನು ಇಂದು ಮಾರುಕಟ್ಟೆ ಕುಸಿತದ ಪರಿಣಾಮ ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿ ರೂ ಗಳಷ್ಟು ನಷ್ಟವಾಗಿದೆ. ಇಂದಿನ ವಹಿವಾಟಿನಲ್ಲಿ ಬಿಎಸ್ಇ-ಲಿಸ್ಟೆಡ್ ಎಲ್ಲಾ ಷೇರುಗಳ ಸಂಚಿತ ಮಾರುಕಟ್ಟೆ ಬಂಡವಾಳೀಕರಣವು 4,49,94,214.99 ಕೋಟಿ ರೂ.ಗೆ (ಅಥವಾ 450 ಲಕ್ಷ ಕೋಟಿ ರೂ.) ಇಳಿದಿದೆ. ಬುಧವಾರ ಇದು 45,399,764.79 ಕೋಟಿ ರೂ.(ಅಥವಾ 454 ಲಕ್ಷ ಕೋಟಿ ರೂ.) ಆಗಿತ್ತು.
ಇಂದಿನ ವಹಿವಾಟಿನಲ್ಲಿ ಎಲ್ಲಾ 30 ಬ್ಲೂ-ಚಿಪ್ ಷೇರುಗಳು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ. ಅಂತೆಯೇ ಡಾ.ರೆಡ್ಡೀಸ್, ಸಿಪ್ಲಾ, ಬಿಪಿಸಿಎಲ್, ಸನ್ ಫಾರ್ಮಾ ಮತ್ತು ಅಪೋಲೋ ಹಾಸ್ಪಿಟಲ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.