ವಾಣಿಜ್ಯ

ರಾಮ ಮಂದಿರ ಎಫೆಪ್ಟ್: ಹೋಟೆಲ್ ಉದ್ಯಮ ಏರುಗತಿಯಲ್ಲಿ, ಜನವರಿ ತಿಂಗಳಲ್ಲಿ 1 ಲಕ್ಷ ಕೋಟಿ ರೂ. ವ್ಯಾಪಾರ-ವಹಿವಾಟು

Srinivas Rao BV

ರಾಮ ಮಂದಿರ ಉದ್ಘಾಟನೆ ಅಯೋಧ್ಯೆಯ ಚಿತ್ರಣವನ್ನೆ ಬದಲಿಸಿದೆ. ಇದಷ್ಟೇ ಅಲ್ಲದೇ ಅಯೋಧ್ಯೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗುವುದರ ಜೊತೆಗೆ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ (MSME) ಗಳಿಗೂ ಬಾಗಿಲು ತೆರೆದಿದೆ. 

ಜನವರಿ ತಿಂಗಳ ಅಂತ್ಯದವರೆಗೆ ಅಯೋಧ್ಯೆಯಲ್ಲಿ ಎಂಎಸ್ಎಂಇ ವಲಯ 1 ಲಕ್ಷ ಕೋಟಿ ರೂಪಾಯಿ ವ್ಯಾಪಾರ-ವಹಿವಾಟು ನಡೆಸಿದ್ದು, ಈ ಕ್ಷೇತ್ರ ಪರಿಣಿತರ ಪ್ರಕಾರ ಇದು ಕೇವಲ ಆರಂಭವಾಗಿದೆ.

ಪ್ರಾಣ-ಪ್ರತಿಷ್ಠೆಯ 10 ದಿನಗಳ ನಂತರ, ಅಯೋಧ್ಯೆಗೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ಪ್ರವಾಸೋದ್ಯಮ ಇನ್ನಷ್ಟು ಏರುಗತಿಯಲ್ಲಿರಲಿದೆ ಎಂಬ ನಿರೀಕ್ಷೆ ಇದೆ. ಪ್ರಾಣಪ್ರತಿಷ್ಠಾಪನೆಯ ಬಳಿಕ ದೇವಾಲಯಕ್ಕೆ ನೇರವಾಗಿ ಸಂಬಂಧಿಸಿದ ಎಂಎಸ್‌ಎಂಇಗಳು ಆರ್ಥಿಕ ಸಮೃದ್ಧಿಯ ಹೊಸ ಯುಗವನ್ನು ನೋಡುತ್ತಿವೆ. ಪೂಜೆಗೆ ಸಂಬಂಧಿಸಿದ ಸರಕುಗಳ ವ್ಯಾಪಾರದಲ್ಲಿ ಅಸಾಧಾರಣ ಏರಿಕೆಯಾಗಿದ್ದು ಜ.1 ರಿಂದ ಜ.26 ವರೆಗೆ 55000 ಕೋಟಿ ರೂಪಾಯಿ ವ್ಯಾಪಾರ-ವಹಿವಾಟು ನಡೆದಿದ್ದು, ಜನವರಿ ಅಂತ್ಯದ ವೇಳೆಗೆ ವ್ಯಾಪಾರ-ವಹಿವಾಟಿನ ಪ್ರಮಾಣ 1 ಲಕ್ಷ ಕೋಟಿ ರೂಪಾಯಿಯನ್ನು ಮುಟ್ಟಿದೆ.

ಅಯೋಧ್ಯೆ ಅಭೂತಪೂರ್ವ ಕೈಗಾರಿಕಾ ಚಟುವಟಿಕೆಗೂ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಹಲವಾರು ಸ್ಟಾರ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ಹೊಂದಿರಲಿದೆ.

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಾದಾಗಿನಿಂದ ಜಿಲ್ಲಾ ಆಡಳಿತದ ಮಾಹಿತಿಯ ಪ್ರಕಾರ ಪ್ರತಿ ದಿನ 2-3 ಲಕ್ಷ ಭಕ್ತಾದಿಗಳು ದರ್ಶನ ಪಡೆಯುತ್ತಿದ್ದಾರೆ. ಒಮ್ಮೆ ಉತ್ತರ ಭಾರತದ ಹವಾಮಾನ ಉತ್ತಮಗೊಂಡು ಚಳಿ ಕಡಿಮೆಯಾದ ನಂತರ ಈ ಸಂಖ್ಯೆ 4-5 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಪ್ರಮಾಣದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಅಗತ್ಯವಿರುವ ಹೋಟೆಲ್ ಹಾಗೂ ರೆಸಾರ್ಟ್ ಗಳನ್ನು ನಿರ್ಮಿಸುವ ಯೋಜನೆಗಳು ಈಗಾಗಲೇ ನಡೆಯುತ್ತಿದ್ದು, ಇನ್ನೂ ಒಂದಷ್ಟು ಯೋಜನೆಗಳು ಪ್ರಾರಂಭವಾಗಲಿವೆ.

ಮೂಲಗಳ ಪ್ರಕಾರ, ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ವರ್ಷದ ಅಂತ್ಯದೊಳಗೆ ಸುಮಾರು 145 ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಅತಿಥಿ ಗೃಹಗಳನ್ನು ಅಯೋಧ್ಯೆಗೆ ತರುವ ಗುರಿಯನ್ನು ಹೊಂದಿದೆ.

3500 ಕೋಟಿ ಮೌಲ್ಯದ ಮತ್ತು 7500 ಕೊಠಡಿಗಳನ್ನು ಒಳಗೊಂಡಿರುವ ಈ ಹೋಟೆಲ್ ಉದ್ಯಮದ ಯೋಜನೆಗಳು ಉನ್ನತ ಮಟ್ಟದ ಪಂಚತಾರಾ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳುತ್ತಿವೆ. ಈ ಸೌಲಭ್ಯಗಳ ನಿರ್ಮಾಣದಿಂದ ಕನಿಷ್ಠ 10,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.

SCROLL FOR NEXT