ವಾಣಿಜ್ಯ

ವಿಮಾನದಲ್ಲಿ ಪ್ರಯಾಣಿಕರಿಗೆ ಅಸುರಕ್ಷಿತ ಆಹಾರ ಪೂರೈಕೆ: ಇಂಡಿಗೋಗೆ ನೋಟಿಸ್

Nagaraja AB

ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಅಸುರಕ್ಷಿತ ಆಹಾರವನ್ನು ನೀಡಿದ್ದಕ್ಕಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)  ಶೋಕಾಸ್ ನೋಟಿಸ್ ನೀಡಿದೆ.

ವಿಮಾನದಲ್ಲಿ ನೀಡಲಾದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದ ಕೆಲವು ದಿನಗಳ ನಂತರ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಬುಧವಾರ ಏರ್‌ಲೈನ್ ಶೋಕಾಸ್ ನೋಟಿಸ್ ಸ್ವೀಕರಿಸಿದ್ದು, ಪ್ರೋಟೋಕಾಲ್ ಪ್ರಕಾರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ. 

ಡಿಸೆಂಬರ್ 29 ರಂದು ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ 6E 6107 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.

ವಿಮಾನದಲ್ಲಿ ಪ್ರಯಾಣಿಕರಿಗೆ ಅಸುರಕ್ಷಿತ ಆಹಾರ ನೀಡುವುದಕ್ಕಾಗಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಎಫ್‌ಎಸ್‌ಎಸ್) ಕಾಯ್ದೆಯ ಪ್ರಕಾರ  ಪರವಾನಗಿಯನ್ನು ಅಮಾನತುಗೊಳಿಸಲು ಅಥವಾ ರದ್ದುಗೊಳಿಸಲು ಏಕೆ ಪರಿಗಣಿಸಬಾರದು ಎಂದು ಜನವರಿ 2 ರಂದು ನೀಡಲಾಗಿರುವ ನೋಟಿಸ್ ನಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಲು ವಿಮಾನಯಾನ ಸಂಸ್ಥೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.

SCROLL FOR NEXT