ವಾಣಿಜ್ಯ

‘ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ’ ಹೆಸರಿನಲ್ಲಿ ಸಿಹಿತಿಂಡಿ ಮಾರಾಟ ಮಾಡಿದ ಅಮೆಜಾನ್‌ಗೆ ನೋಟಿಸ್

Lingaraj Badiger

ನವದೆಹಲಿ: ಮುಖ್ಯ ಆಯುಕ್ತ ರೋಹಿತ್ ಕುಮಾರ್ ಸಿಂಗ್ ನೇತೃತ್ವದ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA), www.amazon.in ನಲ್ಲಿ 'ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್' ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡಿದ ಅಮೆಜಾನ್ ಗೆ ನೋಟಿಸ್ ಜಾರಿ ಮಾಡಿದೆ.

ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಹೇಳಿಕೆಯ ಪ್ರಕಾರ, ಅಮೆಜಾನ್, ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದದ ಹೆಸರಿನಲ್ಲಿ ಸಿಹಿತಿಂಡಿಗಳ ಮಾರಾಟ ಮಾಡುವ ಮೂಲಕ ಮೋಸದ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ನೀಡಿದ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ರಘುಪತಿ ಘೀ ಲಾಡೂ, ಖೋಯಾ ಖೋಬಿ ಲಾಡೂ, ಘೀ ಬಂಡಿ ಲಾಡೂ, ದೇಸಿ ಹಸುವಿನ ಹಾಲಿನ ಪೇಡಾ ಸೇರಿದಂತೆ ಹಲವು ಸಿಹಿ ತಿಂಡಿಗಳನ್ನು ಹೈಲೈಟ್ ಮಾಡಲಾಗಿದೆ.

ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ(www.amazon.in) "ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್" ಎಂದು ಹೇಳಿಕೊಳ್ಳುವ ವಿವಿಧ ಸಿಹಿತಿಂಡಿಗಳು/ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರುವುದನ್ನು ಗಮನಿಸಲಾಗಿದೆ.

ಗ್ರಾಹಕರ ರಕ್ಷಣೆ(ಇ-ಕಾಮರ್ಸ್) ನಿಯಮಗಳು, 2020 ರ ಅಡಿಯಲ್ಲಿ, ಆಹಾರ ಉತ್ಪನ್ನಗಳ ಮಾರಾಟವನ್ನು ಆನ್‌ಲೈನ್‌ನಲ್ಲಿ ಸಕ್ರಿಯಗೊಳಿಸುವುದರಿಂದ ಉತ್ಪನ್ನದ ನಿಜವಾದ ಗುಣಲಕ್ಷಣಗಳ ಬಗ್ಗೆ ಗ್ರಾಹಕರ ದಾರಿ ತಪ್ಪಿಸುತ್ತದೆ ಎಂಬುದು ಗಮನಾರ್ಹವಾಗಿದೆ. ಹೀಗಾಗಿ CCPA ಅಮೆಜಾನ್ ಗೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.

ಒಂದು ವೇಳೆ ನೋಟಿಸ್ ಗೆ ಉತ್ತರ ನೀಡಲು ವಿಫಲವಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

SCROLL FOR NEXT