ಬೆಂಗಳೂರು: ದೇಶದ 2ನೇ ಬೃಹತ್ ಐಟಿ ಕಂಪನಿ (IT Company) ಕರ್ನಾಟಕದ ಇನ್ಫೋಸಿಸ್ ಗೆ ಕರ್ನಾಟಕ ತೆರಿಗೆ ಇಲಾಖೆ ಶಾಕ್ ನೀಡಿದ್ದು, 32 ಸಾವಿರ ಕೋಟಿ ತೆರಿಗೆ ವಂಚನೆ ಆರೋಪದಡಿ ನೋಟಿಸ್ ನೀಡಿದೆ.
ಮೂಲಗಳ ಪ್ರಕಾರ ತೆರಿಗೆ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಕಂಪನಿಗೆ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯವು (DGGI) 32 ಸಾವಿರ ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದೆ.
ಇನ್ಫೋಸಿಸ್ ಕಂಪನಿಯು ಬೇರೆ ದೇಶಗಳಲ್ಲಿ ಹೊಂದಿರುವ ಬ್ರ್ಯಾಂಚ್ ಆಫೀಸ್‌ಗಳಿಂದ 2017-18ರಿಂದ 2021-22ರಲ್ಲಿ ಸರಬರಾಜು ಮಾಡಲಾಗಿರುವ ಸ್ವೀಕೃತಿಗಳ ಬದಲಾಗಿ ಬ್ರ್ಯಾಂಚ್ ಆಫೀಸ್‌ಗಳ ವೆಚ್ಚ ಎಂಬುದಾಗಿ ಉಲ್ಲೇಖಿಸಲಾಗಿದೆ.
ಹಾಗಾಗಿ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ ನಿಯಮಗಳ ಪ್ರಕಾರ ಭಾರತದಿಂದ ಹೊರಗಿರುವ ಬ್ರ್ಯಾಂಚ್‌ಗಳಿಂದ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಕಂಪನಿಯು 32,403 ಕೋಟಿ ರೂ. ಐಜಿಎಸ್‌ಟಿ ಪಾವತಿಸಬೇಕು” ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ರಫ್ತು ಮಾಡಲಾದ ಉತ್ಪನ್ನಗಳ ಇನ್‌ವಾಯ್ಸ್‌ನಲ್ಲಿ ಇನ್ಫೋಸಿಸ್ ಘಟಕಗಳ ಖರ್ಚು ವೆಚ್ಚಗಳನ್ನೂ ನಮೂದಿಸಿರುವುದು ಜಿಎಸ್‌ಟಿ ಗುಪ್ತಚರ ವಿಭಾಗದ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಇನ್ಫೋಸಿಸ್‌ಗೆ 32 ಸಾವಿರ ಕೋಟಿ ರೂ. ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಹಕರೊಂದಿಗಿನ ಒಪ್ಪಂದದ ಭಾಗವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಕಂಪನಿಯು ಸಾಗರೋತ್ತರ ಶಾಖೆಗಳನ್ನು ನಿರ್ಮಾಣ ಮಾಡಿದೆ ಎಂದು ಡಿಜಿಜಿಐ ಹೇಳಿದ್ದು, ಆ ಶಾಖೆಗಳು ಮತ್ತು ಕಂಪನಿಯನ್ನು ಐಜಿಎಸ್‌ಟಿ ಕಾಯಿದೆಯಡಿಯಲ್ಲಿ 'ವಿಶಿಷ್ಟ ವ್ಯಕ್ತಿಗಳು' ಎಂದು ಪರಿಗಣಿಸಲಾಗುತ್ತದೆ. ಸೇವೆಗಳನ್ನು ಸ್ವೀಕರಿಸುವವರಾಗಿ ಸೇವೆಗಳನ್ನು ಆಮದು ಮಾಡಿಕೊಳ್ಳಲು ಐಜಿಎಸ್‌ಟಿಯನ್ನು ಪಾವತಿಸದಿರುವ ಕುರಿತು ಇನ್ಫೋಸಿಸ್ ವಿರುದ್ಧ ಈಗ ತನಿಖೆ ನಡೆಸಲಾಗುತ್ತಿದೆ.
ಇನ್ಫೋಸಿಸ್ ಸ್ಪಷ್ಟನೆ
ಜಿಎಸ್‌ಟಿ ನೋಟಿಸ್ ಕುರಿತು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ. ಇನ್ಫೋಸಿಸ್ ಕಂಪನಿಯು ಯಾವುದೇ ಜಿಎಸ್‌ಟಿ ಪಾವತಿ ಬಾಕಿಯನ್ನು ಉಳಿಸಿಕೊಂಡಿಲ್ಲ. ಐಟಿ ಸೇವೆಗಳ ರಫ್ತಿನ ಮೇಲೆ ಜಿಎಸ್‌ಟಿ ರಿಫಂಡ್ ಪಡೆಯುವ ಅವಕಾಶ ಇದೆ. ಅದರಂತೆ, ಕ್ಲೇಮ್ ಮಾಡಲಾಗಿದೆ. ಇನ್ನು, ಕಂಪನಿಗೆ ಪ್ರಿ-ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಈ ಕುರಿತು ಕಂಪನಿಯು ಪ್ರತಿಕ್ರಿಯೆ ನೀಡಿದೆ ಎಂದು ಸ್ಪಷ್ಟಪಡಿಸಿದೆ.
ನಿಯಮಗಳ ಪ್ರಕಾರ, ಈ ವೆಚ್ಚಗಳಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಇನ್ಫೋಸಿಸ್ ಹೇಳಿದೆ. ಹೆಚ್ಚುವರಿಯಾಗಿ, ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳ ಮೇರೆಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಹೊರಡಿಸಿದ ಇತ್ತೀಚಿನ ಸುತ್ತೋಲೆ (2024 ರ ಜೂನ್ 26, 2024 ರ ಸುತ್ತೋಲೆ ಸಂಖ್ಯೆ 210/4/2024) ಪ್ರಕಾರ, ಸಾಗರೋತ್ತರ ಶಾಖೆಗಳು ಭಾರತೀಯ ಘಟಕಗಳಿಗೆ ಒದಗಿಸುವ ಸೇವೆಗಳು ಜಿಎಸ್‌ಟಿಗೆ ಒಳಪಟ್ಟಿರುತ್ತದೆ.