ಮುಂಬೈ: 6 ದಿನಗಳಿಂದ ಸತತ ಕುಸಿತಗೊಂಡು ನಿನ್ನೆ ಏರಿಕೆ ಕಂಡಿದ್ದ ಭಾರತೀಯ ಷೇರುಸೂಚ್ಯಂಕ ಇಂದು ಮತ್ತೆ ಯೂಟರ್ನ್ ಹೊಡೆದಿದ್ದು, ಕುಸಿತದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಹೌದು.. ನಿನ್ನೆ ಏರಿಕೆ ಕಂಡು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದ್ದ ಭಾರತೀಯ ಷೇರು ಸೂಚ್ಯಂಕ ಇಂದು ಮತ್ತೆ ಅಲ್ಪ ಪ್ರಮಾಣದ ಕುಸಿತಕಂಡಿದೆ.
ಸೆನ್ಸೆಕ್ಸ್ 167.71 ಅಂಕಗಳ ಕುಸಿತದೊಂದಿಗೆ 81,467.10 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಂತೆಯೇ ನಿಫ್ಟಿ ಕೂಡ 31.20 ಅಂಕಗಳ ಕುಸಿದು 24,981.95 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಆರ್ ಬಿಐ ಎಫೆಕ್ಟ್
ಇನ್ನು ಇಂದಿನ ವಹಿವಾಟಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಹತ್ತನೇ ಬಾರಿಗೆ ತನ್ನ ತ್ರೈಮಾಸಿಕ ನೀತಿ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದ್ದೂ ಕೂಡ ಕಾರಣ ಎನ್ನಲಾಗಿದೆ. ಕಳೆದ ತಿಂಗಳು ಯುಎಸ್ ಫೆಡರಲ್ ರಿಸರ್ವ್ ವಿತ್ತೀಯ ನೀತಿ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿದ್ದರೂ ಆರ್‌ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ. ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳು ಸಹ ತಮ್ಮ ಬಡ್ಡಿದರಗಳನ್ನು ಕಡಿಮೆ ಮಾಡಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇನ್ನು ಇಂದಿನ ವಹಿವಾಟಿನಲ್ಲಿ ನಿಫ್ಟಿಯ ಲಿಸ್ಟೆಡ್ ಸಂಸ್ಥೆಗಳಾದ ಐಟಿಸಿ, ನೆಸ್ಲೆ, ರಿಲಯನ್ಸ್ ಇಂಡಸ್ಟ್ರೀಸ್, ಒಎನ್‌ಜಿಸಿ, ಎಚ್‌ಯುಎಲ್ ಸಂಸ್ಥೆಗಳ ಷೇರು ಮೌಲ್ಯ ಕುಸಿದಿದ್ದು, ಟ್ರೆಂಟ್, ಸಿಪ್ಲಾ, ಟಾಟಾ ಮೋಟಾರ್ಸ್, ಎಸ್‌ಬಿಐ ಮತ್ತು ಮಾರುತಿ ಸುಜುಕಿ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ.