ನವದೆಹಲಿ: ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದ್ದರೂ ಭಾರತದಲ್ಲಿ ಮಾತ್ರ ಬಂಗಾರದ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಕಳೆದ ದೀಪಾವಳಿ ವೇಳೆ 62 ಸಾವಿರ ಇದ್ದ ಪ್ರತಿ 10 ಗ್ರಾಂ ಚಿನ್ನದ ಬೆಲೆ ಇದೀಗ 78,500ಕ್ಕೆ ಏರಿಕೆಯಾಗಿದ್ದು, ಶೀಘ್ರದಲ್ಲೇ ಈ ಬೆಲೆ 80,000 ಗಡಿ ದಾಟುವ ಸಾಧ್ಯತೆಗಳೂ ಇವೆ.
ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದರೂ ದೇಶದಲ್ಲಿ ಖರೀದಿದಾರರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಧನ್‌ತೇರಸ್ ಅಥವಾ ಧನತ್ರಯೋದಶಿ ದಿನ ಹತ್ತಿರ ಬರುತ್ತಿದ್ದು, ಚಿನ್ನ, ಬೆಳ್ಳಿ ಖರೀದಿಗೆ ಜನ ಸಿದ್ಧತೆ ನಡೆಸುತ್ತಿದ್ದಾರೆ.
ಈ ಹಬ್ಬದ ಸಂದರ್ಭದಲ್ಲಿ ಜನರು ಸಾಂಪ್ರದಾಯಿಕವಾಗಿ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ. ಇದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಬೆಲೆ ಏರಿಕೆಯು ಮಧ್ಯಮ ವರ್ಗದವರ ಮೇಲೆ ಪರಿಣಾಮ ಬೀರಲಿದೆ. ಹಬ್ಬದ ದಿನ ಚಿನ್ನ-ಬೆಳ್ಳಿ ಖರೀದಿ ಮಾಡಿದರೆ ಅದೃಷ್ಟ ಎಂದು ಜನರು ಖರೀದಿ ಮಾಡುತ್ತಾರೆ. ಆದರೆ, ಬೆಲೆ ಏರಿಕೆಯು ಅವರ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಲಿದೆ ದೆಹಲಿ ಮೂಲದ ರೇಶಮ್ ಗ್ರೂಪ್ನ ಸಂಸ್ಥಾಪಕ ಜೈ ಕಬ್ರಾ ಅವರು ಹೇಳಿದ್ದಾರೆ.
ಈ ನಡುವೆ ಹಬ್ಬದ ಸಂದರ್ಭದಲ್ಲಿ ಆಭರಣ ಮಳಿಗೆಗಳು ಜನರಿಗೆ ಆಫರ್ ಗಳನ್ನು ನೀಡಲು ಮುಂದಾಗುತ್ತಿದ್ದು, ಹಳೆಯ ಚಿನ್ನವನ್ನು ಬದಲಿಸುವ ಅವಕಾಶಗಳನ್ನು ನೀಡಲು ಮುಂದಾಗಿದೆ.
ಹೆಚ್ಚುತ್ತಿರುವ ಚಿನ್ನದ ಬೆಲೆಗಳ ಹೊರತಾಗಿಯೂ, ದೀರ್ಘಾವಧಿಯ ಹೂಡಿಕೆಯಾಗಿ ಚಿನ್ನಾಭರಣಗಳ ಖರೀದಿ ಮಾಡುತ್ತಾರೆ. ಚಿನ್ನದ ಮೇಲೆ ವಿಶ್ವಾಸ ಇರಿಸುತ್ತರೆ. ಹೀಗಾಗಿ ನಾವು ಹಳೆಯ ಚಿನ್ನಾಭರಣಗಳ ಬದಲಿಸುವ ಆಯ್ಕೆಗಳನ್ನು ನೀಡುತ್ತಿದ್ದೇವೆ. ಇದು ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಖರೀದಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ಕಲ್ಯಾಣ್ ಜ್ಯುವೆಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಹೇಳಿದ್ದಾರೆ.
ವಾರಾಂತ್ಯದಲ್ಲಿ ಹಬ್ಬ ಇರುವ ಕಾರಣ ಚಿನ್ನದ ಬೇಡಿಕೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ರೋಕ್ಡೆ ಜ್ಯುವೆಲ್ಲರ್ಸ್‌ನ ನಿರ್ದೇಶಕ ರಾಜೇಶ್ ರೊಕ್ಡೆ ಅವರು ಹೇಳಿದ್ದಾರೆ.
ಮುಂಬೈ ಮೂಲದ ಕೆಡಿಯಾ ಅಡ್ವೈಸರಿ ಸಂಸ್ಥೆಯ ಮುಖ್ಯಸ್ಥ ಅಜಯ್ ಕೇಡಿಯಾ ಮಾತನಾಡಿ, ಮುಂದಿನ ದೀಪಾವಳಿ ವೇಳೆಗೆ ಚಿನ್ನದ ಬೆಲೆ ಹತ್ತು ಗ್ರಾಂಗೆ 100,000 ರೂ.ಗೆ ತಲುಪುವ ಸಾಧ್ಯತೆಗಳಿವೆ, ಬೆಳ್ಳಿ ಕೆಜಿಗೆ 125,000 ರೂ. ತಲುಪಲಿದೆ ಎಂದು ಹೇಳಿದ್ದಾರೆ.